ಜಿಲ್ಲೆ

ವಹಿವಾಟಿನಲ್ಲಿ ನಷ್ಟ, ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಗಾ.ಪಂ.ಮಾಜಿ ಅಧ್ಯಕ್ಷ

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕಡದನಮರಿ ಗ್ರಾ.ಪಂ.ಮಾಜಿ ಅಧ್ಯಕ್ಷರೊಬ್ಬರು ನೀರಿನ ಕುಂಟೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ವ್ಯಾಪಾರದಲ್ಲಾದ ನಷ್ಟವೇ ಕಾರಣ ಎನ್ನುವುದು ತಿಳಿದು ಬಂದಿದೆ.

ಬಿಲ್ಲಾಂಡ್ಲಹಳ್ಳಿಯ ಬಿ.ಎಸ್.ಕೃಷ್ಣಾರೆಡ್ಡಿ(51) ಮೃತರು. ಹಿಂದೆ ಬೆಂಗಳೂರಿನಲ್ಲಿ ಅಂಗಡಿಯನ್ನು ತೆರೆದು ಪತ್ನಿ ಮತ್ತು ಮಗನೊಂದಿಗೆ ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಬೇಸರಗೊಂಡು ಕಳೆದ ಮೂರು ದಿನಗಳ ಹಿಂದೆ ಸ್ವಗ್ರಾಮ ಬಿಲ್ಲಾಂಡ್ಲಹಳ್ಳಿ ಗ್ರಾಮಕ್ಕೆ ಬಂದಿದ್ದರು. ಬೆಂಗಳೂರಿಗೆ ಮತ್ತೆ ವಾಪಸ್ಸು ಹೋಗದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಮಗ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಬಿಲ್ಲಾಂಡ್ಲಹಳ್ಳಿ ಗ್ರಾಮದ ಮನೆಯಲ್ಲೂ ಇರಲಿಲ್ಲ. ಇದರಿಂದ ಹುಡುಕಾಡಿದಾಗ ಗ್ರಾಮದ ನೀರಿನ ಕುಂಟೆಯ ಬಳಿ ದಡದಲ್ಲಿ ಚಪ್ಪಲಿ, ಕನ್ನಡಕ, ಆಧಾರ ಕಾಡ್, ಅಂಗಿ ಇರುವುದು ಗೊತ್ತಾಗಿದೆ. ಇದರಿಂದ ಅಗ್ನಿಶಾಮಕದಳ ಮತ್ತು ಬಟ್ಲಹಳ್ಳಿ ಠಾಣೆಯ ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಕೈಗೊಂಡು, ನೀರಿನಲ್ಲಿ ಬಿದ್ದ ಶವವನ್ನು ಹೊರ ತೆಗೆದಿದ್ದಾರೆ. ಮೃತನ ಮಗ ಬುವನ್ ಸಾಹಿಲ್‌ರೆಡ್ಡಿ ನೀಡಿದ ದೂರಿನ ಮೇಲೆ ಬಟ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.