ಸಾಗರೋತ್ಪನ್ನ 
ಜಿಲ್ಲೆ

73,890 ಕೋಟಿ ಮೌಲ್ಯದ ಸಾಗರೋತ್ಪನ್ನ ರಫ್ತು

ಪ್ರಮುಖ ಮುಖ್ಯಾಂಶಗಳು

  • ಸಾಗರೋತ್ಪನ್ನಗಳ ರಫ್ತು ಪ್ರಾಧಿಕಾರದ ಅಧ್ಯಕ್ಷ ಪಿ. ಜವಾಹರ್ ಹೇಳಿಕೆ
  • ಅಮೆರಿಕ ಮತ್ತು ಚೀನಾ ಭಾರತೀಯ ಸಾಗರೋತ್ಪನ್ನಗಳ ಪ್ರಮುಖ ಆಮದು ರಾಷ್ಟ್ರ
  • ಶೀತಲೀಕರಿಸಿದ ಸೀಗಡಿ ಇದು ಪ್ರಮುಖ ರಫ್ತು ಉತ್ಪನ್ನ
ಮಂಗಳೂರು: ಜಾಗತಿಕ ಸವಾಲುಗಳ ಮಧ್ಯೆಯೂ 2025-26ರ ಆರ್ಥಿಕ ವರ್ಷದಲ್ಲಿ ಭಾರತವು ₹73,890.46 ಕೋಟಿ ಮೌಲ್ಯದ 19,72,018 ಮೆಟ್ರಿಕ್ ಟನ್ ಸಾಗರ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದು ಪ್ರಮಾಣ ಹಾಗೂ ಮೌಲ್ಯದ ದೃಷ್ಟಿಯಿಂದ ಹೊಸ ದಾಖಲೆಯಾಗಿದೆ ಎಂದು ಸಾಗರೋತ್ಪನ್ನಗಳ ರಫ್ತು ಪ್ರಾಧಿಕಾರ (MPEDA) ತಿಳಿಸಿದೆ.
ಅಮೆರಿಕ ಮತ್ತು ಚೀನಾ ಭಾರತೀಯ ಸಾಗರೋತ್ಪನ್ನಗಳ ಪ್ರಮುಖ ಆಮದು ರಾಷ್ಟ್ರಗಳಾಗಿವೆ. ಶೀತಲೀಕರಿಸಿದ ಸೀಗಡಿ ಇದು ಪ್ರಮುಖ ರಫ್ತು ಉತ್ಪನ್ನವಾಗಿದ್ದು, ₹49,037.93 ಕೋಟಿ ಆದಾಯ ಗಳಿಸಿದೆ. 2025-26ರ ಅವಧಿಯಲ್ಲಿ ಒಟ್ಟು 7,92,647 ಮೆಟ್ರಿಕ್ ಟನ್ ಶೀತಲೀಕರಿಸಿದ ಸೀಗಡಿಯನ್ನು ರಫ್ತು ಮಾಡಲಾಗಿದೆ. ಶೀತಲೀಕರಿಸಿದ ಮೀನು ಇದು ಎರಡನೇ ಅತಿ ದೊಡ್ಡ ರಫ್ತು ಉತ್ಪನ್ನವಾಗಿದ್ದು, ₹15,658.37 ಕೋಟಿ ಆದಾಯ ತಂದುಕೊಟ್ಟಿದೆ. ಒಣ ಮೀನು ಉತ್ಪನ್ನಗಳು ಇದರಿಂದ ₹5,079.09 ಕೋಟಿ ಆದಾಯ ಬಂದಿದೆ. ಶೀತಲೀಕರಿಸಿದ ಬೊಂಡಾಸ್ ಇದರ ರಫ್ತು 1,02,060 ಮೆಟ್ರಿಕ್ ಟನ್‌ ತಲುಪಿದ್ದು, ₹4,493.80 ಕೋಟಿ ಆದಾಯ ಗಳಿಸಿದೆ. ಶೀತಲೀಕರಿಸಿದ ಕಪ್ಪೆ ಬೊಂಡಾನ್ ಇದರ ರಫ್ತು ಪ್ರಮಾಣ ಮತ್ತು ಮೌಲ್ಯ ಎರಡರಲ್ಲೂ ಗಣನೀಯ ವೃದ್ಧಿಯಾಗಿದೆ. ತಂಪಾಗಿಸಿದ ತಾಜಾ ಸಮುದ್ರ ಆಹಾರ: ಈ ಉತ್ಪನ್ನಗಳ ರಫ್ತಿನಿಂದ ₹622.31 ಕೋಟಿ ಆದಾಯ ಲಭಿಸಿದೆ.
ಪ್ರಮುಖ ಮಾರುಕಟ್ಟೆಗಳು ಮತ್ತು ಬಂದರುಗಳು
ವಿದೇಶಿ ಮಾರುಕಟ್ಟೆಗಳ ದೃಷ್ಟಿಯಿಂದ ಅಮೆರಿಕ ಸಂಯುಕ್ತ ಸಂಸ್ಥಾನ (USA) ಭಾರತೀಯ ಸಾಗರೋತ್ಪನ್ನಗಳ ಪ್ರಮುಖ ಆಮದುದಾರ ರಾಷ್ಟ್ರವಾಗಿದ್ದು, 279,193 ಮೆಟ್ರಿಕ್ ಟನ್ ಸಮುದ್ರ ಆಹಾರವನ್ನು ಆಮದು ಮಾಡಿಕೊಂಡು ₹20,263.27 ಕೋಟಿ ಮೌಲ್ಯದ ವ್ಯಾಪಾರ ನಡೆಸಿದೆ. ಚೀನಾ, ಜಪಾನ್, ಯುರೋಪ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಗರೋತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿವೆ.
ವಿಶಾಖಪಟ್ಟಣಂ, ಕೊಚ್ಚಿನ್ ಮತ್ತು ನವಿ ಮುಂಬೈನ ಜೆ.ಎನ್.ಪಿ.ಟಿ ಸಾಗರೋತ್ಪನ್ನ ಸರಕು ಸಾಗಣೆಯನ್ನು ನಿರ್ವಹಿಸುವ ಪ್ರಮುಖ ಬಂದರುಗಳಾಗಿವೆ ಎಂದು ಎಂಪೆಡಾ ಅಧ್ಯಕ್ಷ ಪಿ. ಜವಾಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.