ವಿಜಯಪುರ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಗೆ ಸಂಬಂಧಿಸಿದ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಚುನಾವಣೆ ಪೂರ್ವ ನಡೆದ ಮಾತುಕತೆಯ ರಹಸ್ಯ ಸ್ಪೋಟಿಸಿದ್ದಾರೆ.
ವಿಧಾನ ಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ಹಿರಿಯ ಮುಖಂಡ ಮೋಹನ ಎಂಬುವವರು ನೀಡಿದ ವಾಗ್ದಾನ ಹಾಗೂ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ತಮ್ಮ ನಡುವೆ ನಡೆದ ಅಧಿಕಾರ ಒಪ್ಪಂದದ ಹೂರಣವನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಬಿಚ್ಚಿಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದ್ದು, ಆ ನಿಟ್ಟಿನಲ್ಲಿ ಮೂವರೂ ಒಂದಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬಂದರೆ ಅಧಿಕಾರ ಹಂಚಿಕೆ ಮತ್ತು ಮಂತ್ರಿ ಸ್ಥಾನದ ಅವಕಾಶ ನೀಡುವ ಕುರಿತು ಚರ್ಚೆಯಾಗಿತಲ್ಲದೇ ತಮಗೆ ಭರವಸೆ ಕೂಡ ಸಿಕ್ಕಿತ್ತು. ಅಲ್ಲದೇ, ದೆಹಲಿಗೂ ಕರೆಯಿಸಿಕೊಂಡು ಚರ್ಚೆ ಮಾಡಲಾಗಿತ್ತು. ಚುನಾವಣೆ ಸಂದರ್ಭದಲ್ಲಿಯೂ ಭಾಷಣದ ಮಧ್ಯೆ ರಾಜ್ಯ ನಾಯಕರು ಈ ಕುರಿತು ಸೂಚ್ಯವಾಗಿ ಉಲ್ಲೇಖಿಸಿದ್ದರು. ನಾನಾಗಿಯೇ ಮಂತ್ರಿ ಸ್ಥಾನ ಕೇಳಿರಲಿಲ್ಲ. ಹೈಕಮಾಂಡ್ ತಾನೇ ಕೊಟ್ಟ ಮಾತನ್ನು ತಾನು ಉಳಿಸಿಕೊಳ್ಳುವ ಸಮಯ ಇದೀಗ ಬಂದಿದೆ. ಎರಡೂವರೆ ವರ್ಷದ ಬಳಿಕ ತಮಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದ್ದು, ಹೈಕಮಾಂಡ್ ಕೂಡ ಆ ಮಾತು ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದರು.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೂ ತಮಗೆ ಮಂತ್ರಿಗಿರಿಯ ಅವಕಾಶ ಇತ್ತು. ಇಬ್ಬರು ಶಾಸಕರ ಮಧ್ಯೆ 20-20 ತಿಂಗಳ ಅಧಿಕಾರವಧಿ ಹಂಚಿಕೆಯಾಗಿತ್ತಾದರೂ ನಂತರ ಸರ್ಕಾರ ಪತನ ಹೊಂದಿದ್ದರಿಂದ ಆ ಭರವಸೆ ಈಡೇರಲಿಲ್ಲ. ಆಗ ಸಿಕ್ಕಿದ್ದ ನಿಗಮ ಮಂಡಳಿ ಅವಕಾಶವೂ ಕೇವಲ ಎಂಟೂವರೆ ತಿಂಗಳಲ್ಲಿ ಕೈ ಜಾರಿತು. ಇದೀಗ ಕೈ ತಪ್ಪಿ ಹೋದ ಅವಕಾಶಗಳಲ್ಲೆವೂ ಮರಳಿ ಸಿಗುವ ವಿಶ್ವಾಸವಿದೆ. ರಾಜ್ಯದಲ್ಲಿರುವ ನುಡಿದಂತೆ ನಡೆದ ಖ್ಯಾತಿಯ ಸಿದ್ದರಾಮಯ್ಯ ಸರ್ಕಾರ ಮಂತ್ರಿಗಿರಿಯ ವಿಚಾರದಲ್ಲಿಯೂ ನುಡಿದಂತೆ ನಡೆಯಲಿದೆ ಎಂಬ ಅಗಾಧ ನಂಬಿಕೆ ಕ್ಷೇತ್ರದ ಜನರಲ್ಲಿ ಮನೆ ಮಾಡಿದೆ. ಕೊಟ್ಟ ಮಾತುಗಳೆಲ್ಲವೂ ಈಡೇರಿಸಲಾಗುತ್ತದೆಯಾ? ಎಂಬ ಮಾತು, ಮನೋಭಾವ ಮತ್ತು ಧೋರಣೆ ಇದ್ದರೆ ಅದಕ್ಕೆ ತಮ್ಮ ಬಳಿ ಉತ್ತರ ಇಲ್ಲ, ಅದನ್ನು ಜನರೇ ಗಮನಿಸಿಕೊಳ್ಳುವರೆಂದರು.
ಸ್ವಾತಂತ್ರಾೃ ನಂತರ ಇಂಡಿ ಕ್ಷೇತ್ರಕ್ಕೆ ಒಮ್ಮೆಯೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಇದೊಂದು ಶಾಪಗ್ರಸ್ಥ ಕ್ಷೇತ್ರ ಎಂಬ ಭಾವ ಜನರಲ್ಲಿ ಮನೆ ಮಾಡಿದೆ. ಆ ಭಾವ ತೊಲಗಬೇಕು. ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಿಗೂ ಒಂದಕ್ಕಿಂತ ಹೆಚ್ಚು ಬಾರಿ ಮಂತ್ರಿ ಸ್ಥಾನ ಲಭಿಸಿದೆ. ಎಂ.ಬಿ. ಪಾಟೀಲರು 2013, 2018, 2023 ರಲ್ಲಿ ಮಂತ್ರಿಯಾದರೆ ಶಿವಾನಂದ ಪಾಟೀಲರು, 2018 ಮತ್ತು 2023 ರಲ್ಲಿ ಮಂತ್ರಿಯಾದರು. ಅಪ್ಪಾಜಿ ಸಿ.ಎಸ್. ನಾಡಗೌಡರಿಗೂ ಅವಕಾಶ ಸಿಕ್ಕಿದೆ. ಹೀಗಾಗಿ ಒಂದು ಬಾರಿ ಇಂಡಿ ಕ್ಷೇತ್ರಕ್ಕೂ ಅವಕಾಶ ಸಿಗಬೇಕೆಂಬ ಕ್ಷೇತ್ರದ ಜನರ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿರುವೆ. ರಾಹುಲ್ ಗಾಂಧಿ ಅವರಲ್ಲೂ ಮನವಿ ಮಾಡಿದ್ದಾಗಿ ತಿಳಿಸಿದರು.
ಕಳೆದ ಜು. 14 ರಂದು ಇಂಡಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಯ ಬೃಹತ್ ಕಾರ್ಯಕ್ರಮದಲ್ಲಿಯೇ ಕ್ಷೇತ್ರದ ಜನ ಹಾಗೂ ಪಕ್ಷದ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ದಾಂಧಲೆ ನಡೆಸಲು ಸಜ್ಜಾಗಿದ್ದರು. ಆದರೆ, ನನ್ನ ನೈತಿಕ ತತ್ವ, ಸಿದ್ಧಾಂತ ಹಾಗೂ ಪಕ್ಷ ನಿಷ್ಠೆ ಅದನ್ನು ತಡೆದಿತ್ತು. ಅದು ಆ ಕ್ಷೇತ್ರದ ಜನರ ಸಹಜ ಆಕ್ರೋಶ ಎಂದರಲ್ಲದೇ ಅವರು ಕೇಳುವುದರಲ್ಲಿ ತಪ್ಪೇನಾದರೂ ಇದೆಯಾ? ನನ್ನ ಕ್ಷೇತ್ರಕ್ಕೆ ಮಂತ್ರಿಗಿರಿಯ ಅವಕಾಶ ಸಿಕ್ಕಿಲ್ಲ ಹೀಗಾಗಿ ಕೇಳುವುದರಲ್ಲಿ ನ್ಯಾಯ ಇದೆಯೋ ಇಲ್ಲವೋ ಎಂಬುದನ್ನು ನೀವೇ ತೀರ್ಮಾನಿಸಿ ಎಂದು ಸುದ್ದಿಗಾರರು, ಜನರು ಹಾಗೂ ಪಕ್ಷದ ಹೈಕಮಾಂಡ್ ಉದ್ದೇಶಿಸಿ ನುಡಿದರು.
ಕೆಲವರು ಒಳಮೀಸಲಾತಿ ಮಾದರಿ ಲೆಕ್ಕಾಚಾರ ಪ್ರಕಟಿಸಿದರೆ ಇನ್ನೂ ಕೆಲವರು ನಿಗಮ-ಮಂಡಳಿಯ ಅಧಿಕಾರ, ಜಾತಿ ಲೆಕ್ಕಾಚಾರ, ಪ್ರಾದೇಶಿಕತೆಯ ಲೆಕ್ಕಾಚಾರ ಪ್ರಕಟಿಸುತ್ತಾರೆ. ಆದರೆ, ನನ್ನದು ಶುದ್ಧ ಪ್ರಾದೇಶಿಕ ಲೆಕ್ಕಾಚಾರ ಮಾತ್ರವಲ್ಲದೇ ಹೈಕಮಾಂಡ್ ತಾನಾಗಿಯೇ ಮಾತು ಕೊಟ್ಟಿದ್ದರ ಬಗೆಗಿನ ಲೆಕ್ಕಾಚಾರವಾಗಿದೆ ಎಂದ ಯಶವಂತರಾಯಗೌಡರು, ಯಾರದ್ದೂ ಮಂತ್ರಿ ಸ್ಥಾನ ಕಿತ್ತುಕೊಂಡು ನನಗೆ ಕೊಡಿ ಎಂದು ಹೇಳುವ ಸ್ವಾರ್ಥ ರಾಜಕಾರಣಿ ನಾನಲ್ಲ.
ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಸ್ಥಾನ ಮಾನ ಹಂಚಿಕೆಯಾಗಬೇಕಿದೆ. ಈ ಹಿಂದೆ ಎಸ್.ಎಂ. ಕೃಷ್ಣಾ ಅವಧಿಯಲ್ಲಿ ಕಲಬುರಗಿಯಲ್ಲಿ ಆರು ಜನ ಸಚಿವರಿದ್ದರು. ಆ ರೀತಿ ಜಿಲ್ಲೆಗೂ ಹೆಚ್ಚಿನ ಮಂತ್ರಿ ಸ್ಥಾನ ಕೊಡುವುದಾದರೆ ಬೇಡವೆನ್ನಲು ನಾನಾರು? ಬಹುತೇಕರಿಗೆ ನಿಗಮ - ಮಂಡಳಿ ಅವಕಾಶ ನೀಡಲಾಗಿದೆ. ಮಂತ್ರಿ ಸ್ಥಾನಕ್ಕೆ ಸರಿಸಮಾನದ ಅಧಿಕಾರವೂ ನೀಡಲಾಗಿದೆ. ಅಂದಾಜು 40 ಜನರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಇವೆ. ನನಗೂ ಆ ಆಫರ್ ನೀಡಿದಾಗ ಈಗಾಗಲೇ ನಿಗಮ ಮಂಡಳಿ ಸ್ಥಾನ ಅಲಂಕರಿಸಿದ್ದೇನೆ ಹೀಗಾಗಿ ಮಂತ್ರಿ ಸ್ಥಾನ ಕೊಡಿ ಎಂದಿರುವುದಾಗಿ ಯಶವಂತರಾಯಗೌಡರು ಪಕ್ಷದ ಆಂತರಿಕ ಚರ್ಚೆಯ ವಿಚಾರ ಬಹಿರಂಗಗೊಳಿಸಿದರು.
ಮಂತ್ರಿ ಸ್ಥಾನದ ವಿಚಾರದಲ್ಲಿ ಮಾಧ್ಯಮಗಳ ವರದಿಯಿಂದಾಗಿ ತಮ್ಮ ಮತ್ತು ಅಪ್ಪಾಜಿ ಸಿ.ಎಸ್. ನಾಡಗೌಡರ ಮಧ್ಯೆ ಉಂಟಾಗಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಿದ ಯಶವಂತವಂತರಾಯಗೌಡರು, ಅಪ್ಪಾಜಿ ಸಿ.ಎಸ್. ನಾಡಗೌಡರು ಮತ್ತು ತಮ್ಮ ನಡುವಿನ ಅಗಾಧ ಮತ್ತು ಅನನ್ಯ. ಅದು ರಾಜಕೀಯೇತರ ಸಂಬಂಧ. ದಶಕಗಳ ಈ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ನಾವೆಲ್ಲ ಅತ್ಯಂತ ಆತ್ಮೀಯತೆಯಿಂದ ಕೂಡಿ ಬಂದಿದ್ದೇವೆ ಎಂದರು.
2013 ರಲ್ಲಿ ಮೊದಲ ಬಾರಿಗೆ ಶಾಸಕನಾದಾಗ ನಾಡಗೌಡರು, ಶಿವಾನಂದ ಪಾಟೀಲ ಮತ್ತು ತಾವು ಹೈಕಮಾಂಡ್ ಬಳಿ ಒಟ್ಟಿಗೆ ಹೋಗಿ ಅವರಿಬ್ಬರಲ್ಲಿ ಒಬ್ಬರನ್ನು ಮಂತ್ರಿ ಮಾಡಿ ಎಂದು ಬೇಡಿಕೆ ಇಟ್ಟವನು ನಾನು. ಅಷ್ಟೇ ಅಲ್ಲ 2017ನ.11 ರಂದು ಇಂಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಎದುರು ಬಹಿರಂಗ ಸಮಾವೇಶದಲ್ಲಿಯೇ ಮಂತ್ರಿ ಮಾಡುವುದಾದರೆ ಶಿವಾನಂದ ಪಾಟೀಲ ಅಥವಾ ಅಪ್ಪಾಜಿ ಸಿ.ಎಸ್. ನಾಡಗೌಡರನ್ನು ಮಾಡಿ ಎಂದು ಬೇಡಿಕೆ ಇಟ್ಟವನು ನಾನೆಂದು ಸ್ಮರಿಸಿಕೊಂಡರು.
ನಂತರದ ಚುನಾವಣೆಯಲ್ಲಿ ನಾಡಗೌಡರು ಪರಾಭವಗೊಂಡರು ಹೀಗಾಗಿ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಅವರು ಇರಲಿಲ್ಲ. ಅವರಿಗೆ ಮಂತ್ರಿ ಸ್ಥಾನ ಸಿಗುವುದಾದರೆ ನನ್ನದೂ ಅಭ್ಯಂತರವಿಲ್ಲ. ನನ್ನ ಬೇಡಿಕೆ ಇಷ್ಟೆ-ನನ್ನ ಕ್ಷೇತ್ರಕ್ಕೆ ನ್ಯಾಯ ಕಲ್ಪಿಸಿ ಮತ್ತು ಕೊಟ್ಟ ಮಾತು ಉಳಿಸಿಕೊಳ್ಳಿ ಎಂಬುದೆಂದು ಯಶವಂತರಾಯಗೌಡರು ತಪ್ಪು ಗ್ರಹಿಕೆಗೆ ಇತೀಶ್ರಿ ಹಾಡಿದರು.
ಜಿಲ್ಲೆಯ ಆರು ಶಾಸಕರು ಒಟ್ಟಿಗೆ ಹೈಕಮಾಂಡ್ ಬಳಿ ಹೋಗಿ ಮಂತ್ರಿಗಿರಿಗೆ ಬೇಡಿಕೆ ಇಡೋಣ. ಯಾರಿಗೆ ಕೊಟ್ಟರೂ ಸ್ವಾಗತಿಸೋಣ ಎಂಬ ನಾಡಗೌಡರ ಹೇಳಿಕೆಗೆ ಸ್ವಾಗತವಿದೆ. ಆದರೆ, ಕೇವಲ ಶಾಸಕರಷ್ಟೇ ಅಲ್ಲ ವಿಧಾನ ಸಭೆ, ವಿಧಾನ ಪರಿಷತ್ ಹಾಗೂ ಸಂಸದೀಯ ಚುನಾವಣೆಯ ಪರಾಜಿತ ಅಭ್ಯರ್ಥಿಗಳೂ ಬರಲಿ. ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿ ನಾಯಕರೆಲ್ಲರನ್ನೂ ಕರೆದೊಯ್ಯೋಣ. ಮಂತ್ರಿ ಸ್ಥಾನ ಕೇಳುವ ಹಕ್ಕು ಎಲ್ಲಿರಿಗೂ ಇದೆ. ನಾಡಗೌಡರಾದಿಯಾಗಿ, ವಿಠಲ ಕಟಕದೊಂಡ, ಅಶೋಕ ಮನಗೂಳಿ ಸಹಿತ ಎಲ್ಲರಿಗೂ ಹಕ್ಕಿದೆ. ಎಲ್ಲರು ಕೂಡಿಯೇ ರಾಜಕಾರಣ ಮಾಡೋಣ ಎಂದರು.
ಅಲ್ಲದೇ, ಜಿಲ್ಲೆಯಲ್ಲಿ ಎಂದಾದರೂ ಎಲ್ಲರೂ ಒಗ್ಗಟ್ಟಾದ ಉದಾಹರಣೆ ಇದೆಯಾ? ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಕೂಡಿ ಚರ್ಚೆ ಮಾಡಿದ್ದಿದೆಯಾ? ಮಂತ್ರಿ ಸ್ಥಾನಕ್ಕಾಗಿ ಎಲ್ಲರೂ ಕೂಡಿ ಹೈಕಮಾಂಡ್‌ಬಳಿ ಹೋದ ಉದಾಹರಣೆ ಇದೆಯಾ? ಈ ನಿಟ್ಟಿನಲ್ಲಿ ನಾಡಗೌಡರು ಪ್ರಯತ್ನಿಸುವುದಾದರೆ ಅದಕ್ಕಿಂತ ಸಂತೋಷ ಬೇರೆ ಏನಿದೆ? ಎಂದರು.