ದೇವದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಂಡವಾಳಶಾಹಿ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುವ ಮೂಲಕ ರೈತರು, ಬಡವರು ಹಾಗೂ ಕೂಲಿಕಾರರ ಶೋಷಣೆಗೆ ಮುಂದಾಗಿವೆ ಎಂದು ಜನಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಕುಷ್ಟಗಿ ಆರೋಪಿಸಿದರು.
ತಾಲೂಕಿನ ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಾಂತ ರೈತ ಸಂಘದಿಂದ ಆಯೋಜಿಸಿರುವ ಮೂರು ದಿನಗಳ ರೈತರ ಅಧ್ಯಯನ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು. ಕೇಂದ್ರ ಸರ್ಕಾರ ಹಲವು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ.
ರೈತರು, ಕೂಲಿಕಾರರು ಒಂದೇ ನಾಣ್ಯದ ಎರಡು ಮುಖಗಳು. ರೈತರ ಜಮೀನನ್ನು ಕಾರ್ಪೋರೇಟ್ ಕಂಪನಿ, ಬಂಡವಾಳದಾರರಿಗೆ ಒಪ್ಪಿಸುತ್ತಿದೆ. ಇದರಿಂದ ರೈತರು ಮಾತ್ರವಲ್ಲ ಕೂಲಿಕಾರರು ಬೀದಿಗೆ ಬರುತ್ತಾರೆ. ರೈತರು, ಕೂಲಿಕಾರರು, ಕಾರ್ಮಿಕರು ಒಗ್ಗಟ್ಟಾಗಿ ಬಂಡವಾಳಶಾಹಿ ಸರ್ಕಾರಗಳ ವಿರುದ್ಧ ಸಂಘಟಿತ ಹೋರಾಟ ಕೈಗೊಳ್ಳಬೇಕಿದೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗ ನಡೆದ ರೈತರ ಹೋರಾಟದ ಮಾದರಿಯಲ್ಲೆ ಮತ್ತೊಂದು ಸುತ್ತಿನ ಹೋರಾಟ ನಡೆಸುವುದು ಅಗತ್ಯ. ಈ ನಿಟ್ಟಿನಲ್ಲಿ ಅಧ್ಯಯನ ಶಿಬಿರ ಅಗತ್ಯವೆನಿಸಿದೆ ಎಂದರು.
ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ಯಶವಂತ ಮಾತನಾಡಿ, ಎರಡು ದಶಕಗಳ ಕೆಳಗೆ ನಾರಾಯಣಪುರ ಬಲದಂಡೆ ನಾಲೆ ಜಾರಿಗೆ ದೊಡ್ಡಮಟ್ಟದ ಚಳವಳಿ ಸಂಘಟಿಸಲಾಗಿತ್ತು. ಯೋಜನೆ ಜಾರಿಯಾಗಿದ್ದರೂ ಸರ್ಕಾರದ ನಿಷ್ಕಾಳಜಿ, ಅಧಿಕಾರಿಗಳ ಬೇಜವಾಬ್ದಾರಿಯಿಂದ ನಾಲೆಯ ಕೊನೇಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿಗಾಗಿ ಮತ್ತೊಂದು ಸುತ್ತಿನ ಹೋರಾಟ ಮಾಡುವಂಥ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಪ್ರಮುಖರಾದ ಕೆ.ಜಿ.ವೀರೇಶ, ಶ್ಯಾಮರಾವ್ ಕುಲಕರ್ಣಿ, ಸಿ.ಎಸ್.ಪಾಟೀಲ್, ಡಾ.ಎಚ್.ಎನ್.ನಾಡಗೌಡ, ಹನುಮಂತ ನಾಯಕ, ಗಿರಿಯಪ್ಪ ಪೂಜಾರಿ, ಬಸನಗೌಡ ದೇಸಾಯಿ, ಪ್ರಭಾಕರ ಪಾಟೀಲ್ ಇಂಗಳದಾಳ, ದೇವೇಂದ್ರಗೌಡ, ಶರಣಬಸವ, ಶರಣಪ್ಪ ಬಳೆ, ಚಂದ್ರಶೇಖರ ಬಳೆ, ಚಂದಪ್ಪ ಬುದ್ದಿನ್ನಿ, ಮಲ್ಲಣ್ಣ ಬೂದಿನಾಳ, ಅಮರೇಗೌಡ ವಕೀಲ, ಮರಿಲಿಂಗಪ್ಪ ಕೋಳೂರು, ಸದಾಶಿವಯ್ಯ ತಾತ ಇತರರಿದ್ದರು.