ಇಂಡಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಕಡತಗಳನ್ನು ಪರಿಶೀಲಿಸಿದರು. ಡಾ.ರಾಜೇಶ ಕೋಳೆಕರ, ಡಾ.ರವಿ ಭತಗುಣಕಿ ಇತರರಿದ್ದರು. 
ಜಿಲ್ಲೆ

ಅವಧಿ ಮೀರಿದ ಔಷಧ ಪತ್ತೆ

ಇಂಡಿ: ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ ಔಷಧ ವಿಭಾಗಕ್ಕೆ ಭೇಟಿ ನೀಡಿದಾಗ ಅವಧಿ ಮುಗಿದಿದ್ದ (ಮೇ ತಿಂಗಳ) ಆಂಟಿ ಸ್ನೇಕ್ ವೆನ್ಯುಮ್ (ಹಾವು ಕಡಿತದ ಔಷಧ) ಲಭಿಸಿತು.
ಔಷಧ ಸಂಗ್ರಹಾಲಯದ ಸಿಬ್ಬಂದಿ ಹಾಗೂ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಅವಧಿ ಮುಗಿದು ಮೂರು ತಿಂಗಳಾದರೂ ಯಾಕೆ ಈ ಔಷಧಗಳನ್ನು ಔಷಧಾಲಯದಲ್ಲಿಟ್ಟಿದ್ದೀರಿ ? ಯಾವ ವೈದ್ಯರು ನಿಮಗೆ ಇಲ್ಲಿಡುವಂತೆ ಹೇಳಿದ್ದಾರೆ? ಈ ಔಷಧ ಕೊಡುವುದರಿಂದ ಯಾವುದಾದರೂ ಪ್ರಾಣ ಹಾನಿಯಾದರೆ ಯಾರು ಜವಾಬ್ದಾರರು ಎಂದು ಖಡಕ್ಕಾಗಿ ಪ್ರಶ್ನಿಸಿದರು. ಔಷಧಾಲಯದ ಸಿಬ್ಬಂದಿ ಅದೊಂದೇ ನಜರ ಚೂಕಿನಿಂದ ಉಳಿದುಕೊಂಡಿದೆ ಎಂದು ಸಮಾಜಾಯಿಸಿ ನೀಡಲು ಮುಂದಾದಾಗ ಇದು ನಿಮ್ಮ ಬೇಜವಾಬ್ದಾರಿ ತೋರಿಸುತ್ತದೆ ಎಂದು ಆಕ್ರೋಶಗೊಂಡು ನಿಮ್ಮ ಮೇಲೆ ಕ್ರಮ ಕೈಗೊಳ್ಳಲು ತಿಳಿಸುತ್ತೇನೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿನ ವಿವಿಧ ವಾರ್ಡ್‌ಗಳಿಗೆ ತೆರಳಿ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ನೀರಿನ ವ್ಯವಸ್ಥೆ ಸರಿಯಾಗಿ ಕಲ್ಪಿಸುವಂತೆ ಅಲ್ಲಿನ ವೈದ್ಯರಿಗೆ ತಿಳಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ ಮತ್ತು ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲದ ಕುರಿತು ಸಾರ್ವಜನಿಕರಿಂದ ದೂರು ಸಹ ಬಂದಿದ್ದು ಕೂಡಲೇ ಅವುಗಳನ್ನೆಲ್ಲ ಸರಿಪಡಿಸುವಂತೆ ಅಲ್ಲಿನ ವೈದ್ಯರಿಗೆ ತಿಳಿಸಿದರು.
ಹೆರಿಗೆ ಮಾಡಿಸಲು ಹಣ ಪಡೆದುಕೊಳ್ಳುತ್ತಿದ್ದಾರೆಂಬ ಆರೋಪವೂ ಇದ್ದು, ಒಂದು ವೇಳೆ ನಿಜವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಹೊತ್ತಿನಲ್ಲಿ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ವೈದ್ಯರು ಹಾಗೂ ಸಿಬ್ಬಂದಿಗೆ ಎಚ್ಚರಿಸಿದರು.

ಹಲವು ವೈದ್ಯರು ಗೈರಾಗಿದ್ದರಿಂದ ಅವರಿಗೆ ಶೋಕಾಸ್ ನೋಟಿಸ್ ನೀಡಲು ಸಂಬಂಧಿತ ಅಧಿಕಾರಿಗೆ ಸೂಚಿಸಿದರು. ಡಾ.ರಾಜೇಶ ಕೋಳೆಕರ, ಡಾ.ರವಿ ಭತಗುಣಕಿ, ಬಸವರಾಜ ಢವಳಗಿ, ರವಿ ಹಾದಿಮನಿ ಇತರರಿದ್ದರು.

ಔಷಧಾಲಯ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರು ಉತ್ತರ ಕೊಟ್ಟ ನಂತರ ತಪ್ಪು ಎಂಬುದು ಸಾಬೀತಾದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಜಬುನ್ನಿಸಾ ಬೀಳಗಿ, ಆಸ್ಪತ್ರೆ ವೈದ್ಯಾಧಿಕಾರಿ
ಆಸ್ಪತ್ರೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಸಿಬ್ಬಂದಿ- ವೈದ್ಯರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಬಾಣಂತಿಯರಿಗೆ ಬಿಸಿನೀರು ಕೊಡಲ್ಲ. ವಿದ್ಯುತ್ ಇಲ್ಲದಾಗ ಜನರೇಟರ್ ಆರಂಭಿಸಲ್ಲ. ಅವಧಿ ಮುಗಿದ ಔಷಧ ನೀಡುತ್ತಿದ್ದಾರೆ.
ಚಂದ್ರಶೇಖರ ಹೊಸಮನಿ, ಸಾಮಾಜಿಕ ಕಾರ್ಯಕರ್ತ