ರಾಜ್ಯದ ಆರ್ಥಿಕ ಪರಿಸ್ಥಿತಿ ಇಕ್ಕಟ್ಟಿನಲ್ಲಿದೆ. ಕೇಂದ್ರದಿಂದ ಬರುವ ಅನುದಾನ ಸುಮಾರು 11 ಸಾವಿರ ಕೋಟಿ ರೂ.ಗಳು ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 2.37 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದಾರೆ. ಅದನ್ನು ಸರಿದೂಗಿಸಿಕೊಳ್ಳಲು ಅವರು ಕಸರತ್ತು ಮಾಡಿರುವುದು ಕಂಡು ಬರುತ್ತದೆ. ಆರ್ಥಿಕ ಕುಸಿತದ ಸಂದರ್ಭದಲ್ಲಿ ರಾಜಸ್ವ ಹೆಚ್ಚುವರಿಯನ್ನು ತೋರಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.
ಸಾರ್ವಜನಿಕರಿಗೆ ಹೊರೆ ಎನಿಸಿದರೂ ಸಂಪನ್ಮೂಲ ಕ್ರೋಡೀಕರಣಕ್ಕೆ ಅನಿವಾರ್ಯವೇ ಆಗಿದೆ. ಮದ್ಯದ ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗುತ್ತದೆ. ಮೋಟಾರ್ ವಾಹನದಲ್ಲಿ ಸ್ವಲ್ಪ ತೆರಿಗೆ ಹಾಕಲಾಗಿದೆ. ಮುದ್ರಾಂಕ ಮತ್ತು ನೋಂದಣಿಯಲ್ಲಿ ಸಣ್ಣ ಮೊತ್ತದ ಮನೆಗಳಿಗೆ ತೆರಿಗೆ ವಿನಾಯ್ತಿ ನೀಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಇದು ಅವರ ಜಾಣ ನಡೆ ಹೌದು.
ಕೈಗಾರಿಕಾ ಕ್ಷೇತ್ರ ನಮ್ಮ ತೆರಿಗೆ ಹೆಚ್ಚಳಕ್ಕೆ ಅವಕಾಶ ನೀಡುತ್ತದೆ. ನಮ್ಮ ಜಿಡಿಪಿಯ ಶೇ. 49ರಷ್ಟು ಹಾಗೂ ಉದ್ಯೋಗದ ಶೇ. 35ರಷ್ಟು ಕೈಗಾರಿಕೆಯಿಂದಲೇ ಬರುತ್ತದೆ. ಆದ್ದರಿಂದಲೇ ಕೈಗಾರಿಕೆಗೆ ಸಾಕಷ್ಟು ಆದ್ಯತೆ ನೀಡಿದ್ದಾರೆ. ಕೈಗಾರಿಕೆಗಳು ಸ್ಥಾಪನೆಯಾದರೆ ಹೂಡಿಕೆ ಬಂದು ತೆರಿಗೆಯೂ ಬರುತ್ತದೆ. ಯಡಿಯೂರಪ್ಪ ಅವರು ಕೃಷಿಯ ನಂತರ ಕೈಗಾರಿಕೆಗೆ ಆದ್ಯತೆ ನೀಡಿರುವುದು ಸಹ ಅದೇ ಕಾರಣಕ್ಕೆ ಆಗಿದೆ.
ಜಿಎಸ್ಟಿ ಸಂಗ್ರಹದಲ್ಲಿ ನಮ್ಮ ರಾಜ್ಯದಲ್ಲಿ ಶೇ. 8ರಷ್ಟು ಬೆಳವಣಿಗೆಯಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆಯೂ ಹೌದು. ಪ್ರಧಾನಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಾಗಬೇಕಾದರೆ ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆ ಅಗತ್ಯ ಎಂಬುದನ್ನು ಯಡಿಯೂರಪ್ಪ ಗುರುತಿಸಿದ್ದಾರೆ.
| ಐ. ಎಸ್. ಪ್ರಸಾದ್ ತೆರಿಗೆ ಸಲಹೆಗಾರರು