ಕೊಕಟನೂರ: ರೈತ ಸಂಕುಲಕ್ಕೆ ಮಾರಕವಾದ ವಿಧೇಯಕಗಳನ್ನು ಕೈ ಬಿಡದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ರೈತ ಸಂಘಟನೆಗಳು ನಿದ್ರಿಸಲು ಬಿಡುವುದಿಲ್ಲ ಎಂದು ಬೆಳಗಾವಿ ಜಿಲ್ಲಾ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ರಾಘವೇಂದ್ರ ನಾಯಿಕ ಗುಡುಗಿದ್ದಾರೆ.
ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಹಸಿರುಸೇನೆ ಹಾಗೂ ರೈತ ಸಂಘದ ನೂತನ ಘಟಕ ಉದ್ಘಾಟನೆ ಹಾಗೂ ಹಸಿರು ಶಾಲು ದೀಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೈತರ ಬೆಳೆಗಳಿಗೆ ಸರಿಯಾದ ಬೆಲೆಯಿಲ್ಲ. ಸಾರಿಗೆ ವ್ಯವಸ್ಥೆಯಿಲ್ಲ. ಕಬ್ಬು ಪೂರೈಸಿದ ರೈತರಿಗೆ ಕಾರ್ಖಾನೆ ಮಾಲೀಕರು ಬಿಲ್ ಪಾವತಿಸದೆ ಸತಾಯಿಸುತ್ತಿದ್ದಾರೆ. ಉಭಯ ಸರ್ಕಾರಗಳು ಈ ಕುರಿತು ಕ್ರಮ ಕೈಗೊಳ್ಳದೆ ಕಾರ್ಖಾನೆ ಮಾಲೀಕರ ತಾಳಕ್ಕೆ ಹೆಜ್ಜೆ ಹಾಕುತ್ತಿವೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಶಾಸಕರ ಒಡೆತನದ್ದೇ ಆಗಿವೆ. ಹೀಗಾಗಿ ಕಳ್ಳರ ಕೈಯಲ್ಲಿ ಅಧಿಕಾರ ಕೊಟ್ಟಂತಾಗಿದೆ. ಕುರಿ ಹಿಂಡಿಗೆ ತೋಳ ಕಾವಲಿಟ್ಟಂತಾಗಿದೆ ಎಂದು ಚಾಟಿ ಬೀಸಿದರು.
ಕೃಷಿ ವಿಧೇಯಕವನ್ನು ಮರು ಮಾರ್ಪಾಡು ಮಾಡುವ ತನಕ ರೈತ ಸಂಘಟನೆಗಳು ವಿಶ್ರಮಿಸುವದಿಲ್ಲ. ರೈತರು ಒಗ್ಗಾಟ್ಟಾಗಿ ಆಳುವ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಸದಾ ಮಾಡುತ್ತೆವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಹಸಿರುಸೇನೆ ಹಾಗೂ ರೈತ ಸಂಘದ ಅಧ್ಯಕ್ಷ ಪ್ರಕಾಶ ಪೂಜಾರಿ, ಸಂಘಟನೆ ಪದಾಧಿಕಾರಿಗಳು ವೈಯಕ್ತಿಕ ಹಿತಾಸಕ್ತಿ ಕಡೆ ಗಮನ ಕೊಡದೆ, ರೈತ ಸಮುದಾಯಕ್ಕೆ ಬಲ ತುಂಬಬೇಕು ಎಂದರು. ಇದೇ ವೇಳೆ ಸುಮಾರು 200 ರೈತರಿಗೆ ಶಾಲು ದಿಕ್ಷೆ ಮಾಡಲಾಯಿತು. ರಾಜ್ಯ ಸಂಚಾಲಕ ಚಿನ್ನಪ್ಪ ಪೂಜಾರಿ, ಎ.ಎಂ. ನಾಯಿಕ, ಬಳ್ಳಿಗೇರಿ ಶಾಖಾ ಘಟಕ ಅಧ್ಯಕ್ಷ ಅಶೋಕ ಪಾಟೀಲ, ಬಂಗಾರೆಪ್ಪ ಬೆಳಗಲಿ, ಕಾಂತು ತಳವಾರ, ರಜಾಕ ಮುಲ್ಲಾ, ವಿನೋದ ಇಮ್ಮಡಿ, ಅಲಗೊಂಡ ಪಾಟೀಲ, ರವಿ ಸನದಿ, ಪರಮೇಶ್ವರ ಮಾಳಿ, ಗುಂಡು ಕುಳ್ಳೋಳ್ಳಿ, ಸುನೀಲ ಮಾಳಿ ಇತರರಿದ್ದರು.