ಜಿಲ್ಲೆ

ಮೀನುಗಾರಿಕಾ ಕ್ಷೇತ್ರದಲ್ಲಿ ವಿಪುಲ ಅವಕಾಶ -ಡಾ.ಎಸ್.ಎಂ.ಶಿವಪ್ರಕಾಶ್

Mangaluru - Hariprasad Rai




ಮಂಗಳೂರು : ಜನರ ಬದುಕನ್ನು ಅರ್ಥೈಸಿಕೊಳ್ಳಲು, ಜ್ಞಾನ ವೃದ್ಧಿಗೆ ಹಾಗೂ ಸಮಾಜ ಸೇವೆ ಮಾಡಲು ಕೃಷಿ, ಪಶು ವೈದ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕಾ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ ಎಂದು ಮಂಗಳೂರು ಮೀನುಗಾರಿಕಾ ಕಾಲೇಜಿನ ಮೀನುಗಾರಿಕಾ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ಮಾಜಿ ಡೀನ್ ಡಾ.ಎಸ್.ಎಂ.ಶಿವಪ್ರಕಾಶ್ ಹೇಳಿದರು.
ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಎಕ್ಸ್‌ಪೋಡಿಯಂ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ಎಜುಪಾತ್ ಸರಣಿ ಕಾರ್ಯಕ್ರಮದಲ್ಲಿ ಕೃಷಿ, ಪಶುವೈದ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕಾ ವಿಜ್ಞಾನ ಪದವಿ ಕೋರ್ಸ್‌ಗಳ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಭಾರತ ಮತ್ತು ವಿಶ್ವದ ಆರ್ಥಿಕತೆಯಲ್ಲಿ ಮೀನುಗಾರಿಕೆ ಪ್ರಾಮುಖ್ಯತೆ ಪಡೆದಿದೆ. ಕೃಷಿ, ಪಶು ವೈದ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕಾ ಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ಉನ್ನತ ಶಿಕ್ಷಣವನ್ನು ಪಡೆದು ಸಂಶೋಧನೆಗಳಲ್ಲಿ ತೊಡಗಿಸಿಕೊಂಡರೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಮತ್ತು ಉತ್ತಮ ವೇತನ ಪಡೆಯಬಹುದು. ವಿಜ್ಞಾನದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಈ ವಿಭಾಗದಲ್ಲಿ ಮುಂದುವರಿಸಿದರೆ ಭವಿಷ್ಯ
ಉತ್ತಮವಾಗಿರುತ್ತದೆ. ಜಲಚರ, ಪ್ರಾಣಿ, ಪಕ್ಷಿಗಳ ಸಮಸ್ಯೆಯನ್ನು ಅರಿತು ಸ್ಪಂದಿಸುವುದು ಶ್ರೇಷ್ಠವಾದ ವೃತ್ತಿಕಾರ್ಯ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಉಪನ್ಯಾಸಕ ಕರುಣಾಕರ ಬಳ್ಕೂರು ಉಪಸ್ಥಿತರಿದ್ಧರು. ವಿದ್ಯಾರ್ಥಿನಿ ಹಿಮಾನಿ ಕಾರ್ಯಕ್ರಮ ನಿರೂಪಿಸಿದರು.