ಶಿರಸಿ: ಯಕ್ಷಗಾನ ಕಲೆಯಲ್ಲಿ ಹದವರಿತ ಕಲಾವಿದರು ಇದ್ದರೆ ಶಾಶ್ವತವಾಗಿ ನಿಲ್ಲುತ್ತಾರೆ. ಯಕ್ಷಗಾನದ ಆರೋಗ್ಯಕ್ಕೆ ಅವರು ಕಾರಣರಾಗುತ್ತಾರೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಸ್ವರ್ಣವಲ್ಲೀ ಸುಧರ್ವ ಸಭಾಭವನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಯಕ್ಷೋತ್ಸವದ ಸಮಾರಂಭದಲ್ಲಿ ಭಾನುವಾರ ಎಂ.ಎ. ಹೆಗಡೆ ದಂಟ್ಕಲ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕಲಾವಿದರಿಗೆ ನೃತ್ಯ, ತಾಳ, ಹಾಗೂ ಮಾತುಗಾರಿಕೆ ಮುಖ್ಯ. ಪ್ರತಿಯೊಂದು ಪಾತ್ರಕ್ಕೂ ಋಷಿಗಳನ್ನು ಹಿನ್ನೆಲೆ ಇಟ್ಟು ಬರೆದಿದ್ದಾರೆ. ಆದ್ದರಿಂದ ಪಾತ್ರದ ತತ್ವವೂ ಅಷ್ಟೇ ಮುಖ್ಯವಾಗಿದೆ. ಆಗ ಪ್ರೇಕ್ಷಕರ ಜತೆ ಪಂಡಿತರು ಮೆಚ್ಚುತ್ತಾರೆ ಎಂದ ಶ್ರೀಗಳು ಕಲಾವಿದರು ಆರೋಗ್ಯದ ಬಗ್ಗೆಯೂ ಲಕ್ಷ್ಯ ವಹಿಸಬೇಕು. ಯಕ್ಷಗಾನದ ಕಲಾವಿದರಿಗೆ ಈ ಸೂಕ್ಷ್ಮತೆ ಅವರಿಗೆ ಬಂದರೆ ಯಕ್ಷಗಾನದ ಆರೋಗ್ಯವೂ ಉತ್ತಮವಾಗಿರುತ್ತದೆ. ಮನಸಿಗೆ ಹೆಚ್ಚಿಗೆ ಕೆಲಸ ನೀಡಿದರೆ ಒತ್ತಡ ಹೆಚ್ಚುತ್ತದೆ. ಕಡಿಮೆ ಕೆಲಸ ನೀಡಿದರೆ ನಿಷ್ಕ್ರಿಯವಾಗುತ್ತದೆ. ಹದವಾದ ಕೆಲಸ ನೀಡಬೇಕು ಎಂದರು.
ದಿ.ಎಂ.ಎ. ಹೆಗಡೆ ದಂಟಕಲ್ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ವಿದ್ವಾಂಸ ಮೃತ್ಯುಂಜಯ ಗಿಂಡಿಮನೆ ಅವರಿಗೆ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಶಸ್ತಿಯು ಶ್ರೀಗಳ ಶುಭಾಶೀರ್ವಾದ. ಒಳ್ಳೆಯ ಜನರ ಒಳ್ಳೆಯ ಮಾತು ಒಳ್ಳೆಯ ಫಲಿತಾಂಶ ಲಭಿಸುತ್ತದೆ. ದಿ. ಹೊಸ್ತೋಟ ಮಂಜುನಾಥ ಭಾಗವತರನ್ನು ಹಾಗೂ ದಿ.ಎಂ.ಎ. ಹೆಗಡೆ ಅವರನ್ನು ನಾವು ಸ್ಮರಿಸಬೇಕು ಎಂದರು.
ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಭಾನು ಜಿ.ಟಿ ಮಾತನಾಡಿ, ಇಹದಲ್ಲಿ ಅರಿತುಕೊಂಡಾಗ ಸರಿದಾರಿಯಲ್ಲಿ ಹೋದಾಗ ಬದುಕಿನಲ್ಲಿ ಸಾರ್ಥಕತೆ ಸಿಗುತ್ತದೆ. ವಿದ್ಯೆ, ವಿನಯ ನೀಡಿದಾಗ ಬದುಕು ಉತ್ತಮವಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಎಂ.ಎನ್. ಹೆಗಡೆ ಹಳವಳ್ಳಿ, ಯಕ್ಷಶಾಲ್ಮಲಾ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ಇತರರಿದ್ದರು. ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ, ಶ್ರೀನಿವಾಸ ಭಾಗ್ವತ್ ಮತ್ತಿಘಟ್ಟ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮಠದ ವಿದ್ಯಾರ್ಥಿಗಳು ವೇದಘೊಷ ಹಾಡಿದರು. ನಿರ್ಣಾಯಕರ ಪರವಾಗಿ ಸುಕನ್ಯಾ ಮಣ್ಮನೆ ಸ್ಪರ್ಧಾಳು ಪಂಚಮಿ ಹಸರಪಾಲು ಹಾಗೂ ಪಾರ್ಥನಾ ಭಟ್ಟ ಅನಿಸಿಕೆ ವ್ಯಕ್ತಪಡಿಸಿದರು. ಮಕ್ಕಳಿಗೆ ನಡೆದ ತಾಳಮದ್ದಲೆ ಸ್ಪರ್ಧೆಯಲ್ಲಿ 26 ತಂಡಗಳಲ್ಲಿ 125 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಂಗ ಮತ್ತು ನಾಟ್ಯಕ್ಕೆ ಅವಿನಾಭಾವ ಸಂಬಂಧವಿದೆ. ಆ ಕಾರಣಕ್ಕೆ ನಟರಾಜ ಮತ್ತು ರಂಗನಾಥರನ್ನು ಆರಾಧಿಸುತ್ತೇವೆ. ಭವ್ಯ ಭಾರತದ ಪರಂಪರೆ ಮತ್ತು ಭವಿಷ್ಯ ಇಂದಿನ ವಿದ್ಯಾರ್ಥಿಗಳು. | ಹರ್ಷಭಾನು, ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ