ವಿಜಯವಾಣಿ ಸುದ್ದಿಜಾಲ ತುಮಕೂರು
ಆರಂಭವಾಗಿ 17 ವರ್ಷಗಳಲ್ಲಿಯೇ ಇದೇ ಮೊದಲ ಸಲ ಎಂಬಂತೆ ತುಮಕೂರು ವಿಶ್ವವಿದ್ಯಾಲಯ ದುಂದು ವೆಚ್ಚದಲ್ಲಿ ಘಟಿಕೋತ್ಸವ ಆಯೋಜಿಸಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ಆ.7ರಂದು ವಿಶ್ವವಿದ್ಯಾಲಯದ 17ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದ್ದು, 25 ಲಕ್ಷ ರೂ. ವೆಚ್ಚದಲ್ಲಿ ಜರ್ಮನ್ ಟೆಂಟ್ ನಿರ್ಮಿಸಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ವಿವಿ ಆವರಣದಲ್ಲಿಯೇ ಬೃಹತ್ ಸಂಖ್ಯೆಯಲ್ಲಿ ಜನರು ಕೂರಲು ಅವಕಾಶವಿರುವ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣವಿದ್ದರೂ ಜರ್ಮನ್ ಟೆಂಟ್ ವ್ಯಾಮೋಹ ವಿದ್ಯಾರ್ಥಿಗಳ ಜೀಬಿಗೆ ಕತ್ತರಿ ಹಾಕಿದೆ.
ಕಳೆದ ಐದಾರು ವರ್ಷದಿಂದ ಸರ್ಕಾರದಿಂದ ನಯಾಪೈಸೆ ಅನುದಾನ ಬರದಿದ್ದರೂ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿರುವ ವಿವಿ ಆಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ವಿವಿ ಅಂತರಿಕ ನಿಧಿಯನ್ನು ಆಡಂಬರದ ಕಾರ್ಯಕ್ರಮಗಳಿಗೆ ಬಳಸುತ್ತಿರುವ ಬಗ್ಗೆ ವಿವಿ ಪ್ರಾಧ್ಯಾಪಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ತುಮಕೂರು ವಿವಿ ಇತಿಹಾಸದಲ್ಲಿ ಒಮ್ಮೆ ಮಾತ್ರ ರಾಜಭವನ ಸಭಾಂಗಣದಲ್ಲಿ ಘಟಿಕೋತ್ಸವ ಆಯೋಜಿಸಲಾಗಿತ್ತು. ಇದರ ಹೊರತಾಗಿ ತುಮಕೂರು ವಿವಿ ವಿಜ್ಞಾನ ಕಾಲೇಜು ಆವರಣದಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿಯೇ ಬಹುತೇಕ ಸಮಾರಂಭ ನಡೆದಿವೆ. ಘಟಿಕೋತ್ಸವಕ್ಕೆ ದುಬಾರಿ ಘಟಿಕೋತ್ಸವಕ್ಕಾಗಿಯೇ ಈ ಸಭಾಂಗಣ ನಿರ್ಮಿಸಲಾಗಿದ್ದರೂ ದುಬಾರಿ ವೆಚ್ಚಕ್ಕೆ ಮುಂದಾಗಿರುವ ವಿವಿಯ ನಿರ್ಧಾರದ ಬಗ್ಗೆ ಗುಸುಗುಸು ಕೇಳಿಬಂದಿದೆ.
ಘಟಿಕೋತ್ಸವ ಸಮಾರಂಭ ಮುಗಿದ ನಂತರ ಜರ್ಮನ್ ಟೆಂಟ್ಅನ್ನು ಖಾಸಗಿ ಸಂಸ್ಥೆಯ ಆಹಾರ ಮೇಳಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ವದಂತಿಯೂ ಇದೆ. ತುಮಕೂರು ವಿವಿಯಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಿದ್ದು, ಆರ್ಥಿಕವಾಗಿ, ಸಮಾಜಿಕವಾಗಿ ಹಿಂದುಳಿದವರೇ ಆಗಿದ್ದಾರೆ. ವಿವಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ಆಡಂಬರದ ಆಚರಣೆಗೆ ಕಡಿವಾಣ ಹಾಕಿ ಗುಣಮಟ್ಟದ ಶಿಕ್ಷಣಕ್ಕೆ ಆಂತರಿಕ ನಿಧಿ ಬಳಸಬೇಕು ಎಂಬ ಕೂಗಿದೆ.
ಘಟಿಕೋತ್ಸವದಲ್ಲಿ ತುಮಕೂರು ವಿವಿ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ಸಚಿವ ತುಮಕೂರು ವಿವಿ ಸಮಕುಲಾಧಿಪತಿಗಳೂ ಆದ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಶ್ರಾಂತ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಘಟಿಕೋತ್ಸವ ಭಾಷಣ ನೆರವೇರಿಸಲಿರುವರು. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವರಾದ ನಾಹಿದಾ ಜಮ್ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ಉಪಸ್ಥಿತರಿರುವರು.
ಸಿಂಡಿಕೇಟ್ ಸಭೆಯಲ್ಲಿ ಏಕಪಯ ನಿರ್ಧಾರ
ತುಮಕೂರು ವಿವಿ ಸಿಂಡಿಕೇಟ್ನಲ್ಲಿ ಜನರನ್ನು ಪ್ರತಿನಿಧಿಸುವ ಸಲುವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಕಳೆದ 2 ವರ್ಷದಿಂದಲೂ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಇಂತಹ ವಿದ್ಯಾರ್ಥಿ ವಿರೋಧಿ ನಿಲುವುಗಳಿಗೆ ಅವಕಾಶ ಮಾಡಿಕೊಂಟಂತಾಗಿದೆ. ರಾಜ್ಯಪಾಲರಿಂದ ನಾಮನಿರ್ದೇಶಿತರಾದ ಇಬ್ಬರು ಸದಸ್ಯರಿದ್ದಾರೆ. ಆದರೂ, ಸ್ಥಳಿಯರಲ್ಲದ ಕಾರಣದಿಂದ ತುಮಕೂರು ವಿವಿ ವಿದ್ಯಾರ್ಥಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯ ಅರಿವಿಲ್ಲದೆ ದುಂದು ವೆಚ್ಚಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಆತಂಕ ಮೂಡಿಸಿದೆ. ಕಳೆದ ಎರಡು ವರ್ಷದಿಂದ ಖಾಲಿ ಇರುವ ಸಿಂಡಿಕೇಟ್ ಸದಸ್ಯರ ನೇಮಿಸಬೇಕಿದೆ. ವಿದ್ಯಾರ್ಥಿಗಳ ವಾರ್ಷಿಕ ಶುಲ್ಕದಿಂದ ಸಂಗ್ರಹವಾಗುವ "ವಿವಿ ಆಂತರಿಕ ನಿಧಿ'ಯನ್ನು ಈಗಾಗಲೇ ಕಟ್ಟಡ, ಚರಂಡಿ ನಿರ್ಮಾಣಕ್ಕೆ ಬೇಕಾಬಿಟ್ಟಿಯಾಗಿ ಬಳಕೆ ಮಾಡುತ್ತಿರುವುದು ಭವಿಷ್ಯದಲ್ಲಿ ಪ್ರಾಧ್ಯಾಪಕರಿಗೆ ಸಕಾಲದಲ್ಲಿ ವೇತನ ಪಾವತಿಸಲು ಕಷ್ಟವಾಗುವ ಸಾಧ್ಯತೆಯಿದೆ. ಮುಂದಾಲೋಚನೆ ಇಲ್ಲದೆ ವಿವಿಯಲ್ಲಿ ನಡೆಯುತ್ತಿರುವ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಜತೆಗೆ ತುಮಕೂರು ವಿವಿ ಏಕಪಯ ನಿರ್ಧಾರಕ್ಕೆ ಕಡಿವಾಣ ಹಾಕುವ ತುರ್ತು ಅಗತ್ಯವಿದೆ.
ತುಮಕೂರು ವಿವಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದಕ್ಕಿಂತ ಕಾಮಗಾರಿಗಳಿಗೆ, ದುಂದು ವೆಚ್ಚಕ್ಕೆ ಆದ್ಯತೆ ನೀಡಲಾಗುತ್ತಿದೆ. ವಿವಿ ಆಡಳಿತದಲ್ಲಿ ಖಾಸಗಿ ವ್ಯಕ್ತಿಗಳು ಹಸ್ತಕ್ಷೇಪ ಮಾಡುತ್ತಿರುವುದು ಇಂತಹ ವಿದ್ಯಾರ್ಥಿ ವಿರೋಧಿ ನಿರ್ಧಾರಗಳಿಗೆ ಕಾರಣವಾಗುತ್ತಿದೆ. ವಿವಿ ಆಂತರಿಕನಿಧಿ ದುರ್ಬಳಕೆ ಬಗ್ಗೆ ಸರ್ಕಾರ ನಿಗಾವಹಿಸಿ ವಿದ್ಯಾರ್ಥಿಗಳ ಹಿತ ಕಾಯಬೇಕು. ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ
ತುಮಕೂರು ವಿವಿ
ವಿದ್ಯಾರ್ಥಿಗಳ ಹಣ ವಿವಿ ಮನಸೋಇಚ್ಛೆ ಬಳಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿಯೇ ಸುಸಜ್ಜಿತ ಸಭಾಂಗಣವಿದ್ದರೂ ಸಂಪ್ರದಾಯ ಮುರಿದು ಲಾಂತರ ರೂ. ವೆಚ್ಚದಲ್ಲಿ ಘಟಿಕೋತ್ಸವ ನಡೆಸುತ್ತಿರುವುದು ಖಂಡನೀಯ. ಜರ್ಮನ್ ಟೆಂಟ್ ಹಾಕಿಸುವುದರಿಂದ ಶಿಕ್ಷಣದ ಗುಣಮಟ್ಟಕ್ಕೆ ಪ್ರಯೋಜನವೇನು. ರಾಜು ಮಾಜಿ ಸಿಂಡಿಕೇಟ್ ಸದಸ್ಯ