ಚಿಕ್ಕಮಗಳೂರು: ಪರಿಶಿಷ್ಟ ಜಾತಿ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ರೂಪಿಸುವ ಯೋಜನೆಗೆ ಬಿಡುಗಡೆಯಾಗುವ ಅನುದಾನವನ್ನು ಕಾಲಮಿತಿಯಲ್ಲಿ ವೆಚ್ಚ ಮಾಡಿ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೆಲವು ಇಲಾಖೆ ಅಧಿಕಾರಿಗಳು ವರ್ಷವಿಡಿ ಅನುದಾನ ಖರ್ಚು ಮಾಡದಿದ್ದರೂ ಮಾರ್ಚ್ನಲ್ಲಿ ಶೇ. ೧೦೦ ರಷ್ಟು ಸಾಧನೆ ಆಗಿದೆ ಎಂದು ಮಾಡುತ್ತಾರೆ. ಆದರೆ ಇದಕ್ಕೆ ಅವಕಾಶ ನೀಡದೆ ಕೊನೆಯಲ್ಲಿ ಖರ್ಚು ಮಾಡುವ ಇಲಾಖೆ ಅಧಿಕಾರಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ. ನೈಜ ಕಾರಣಗಳು ಇಲ್ಲದಿದ್ದಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಕಾಲದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅನುದಾನ ವೆಚ್ಚ ಮಾಡಿ, ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯದಿರುವ ಅಧಿಕಾರಿಗಳು ಕೂಡಲೇ ಅನುಮೋದನೆ ಪಡೆದು ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ತಿಳಿಸಿದರು.
ಕೆಲವು ಇಲಾಖೆಗಳ ಪ್ರಗತಿ ಶೂನ್ಯವಾಗಿದ್ದು, ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು ಕಾಲಮಿತಿಯೊಳಗೆ ನಿಗಧಿತ ಗುರಿ ಸಾಧಿಸಬೇಕು. ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಸವಲತ್ತುಗಳನ್ನು ಕಲ್ಪಿಸಬೇಕು. ಆ ಕುರಿತು ವರದಿಯನ್ನು ನಿಗದಿತ ಅವಧಿಯೊಳಗೆ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಬಿ.ಗೋಪಾಲಕೃಷ್ಣ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.