ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗದಂತೆ ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್ ಮೂಲಕ ಪೂರೈಕೆಗೆ ಸಜ್ಜಾಗುತ್ತಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ತೀರ ಬಿಗಡಾಯಿಸಿಲ್ಲ. ಗ್ರಾಮೀಣ ಭಾಗದಲ್ಲಿ ಕೊಳವೆಬಾವಿಗಳೂ ಇನ್ನು ಉಸಿರಾಡುತ್ತಿರುವುದರಿಂದ ಸಮಸ್ಯೆ ಗಂಭೀರವಾಗಿಲ್ಲ. ಆದರೂ ಮುಂದಿನ ದಿನಗಳಲ್ಲಿ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಇ-ಟೆಂಡರ್ ಕರೆಯಲು ಜಿಲ್ಲಾಡಳಿತ ಮುಂದಾಗಿದೆ.
ಪ್ರಸ್ತುತ ದಿನಗಳಲ್ಲಿ ನೆಲಮಂಗಲ ನಗರ ವ್ಯಾಪ್ತಿಯಲ್ಲಿ ಕೆಲವು ಭಾಗಗಳಲ್ಲಿ ಸಮಸ್ಯೆ ಬಿಗಡಾಯಿಸಿದೆ. ಅದೇ ರೀತಿ ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ನೀರಿಗಾಗಿ ಜನ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಚನ್ನರಾಯಪಟ್ಟಣ ಪಂಚಾಯಿತಿ ವ್ಯಾಪ್ತಿ ಮತ್ತು ಬೂದಿಗೆರೆಯ ಇಂದ್ರಹಳ್ಳಿ ಗ್ರಾಮಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆ ಎದುರಾಗಿದ್ದು, ತಾತ್ಕಾಲಿಕವಾಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಪಾತಾಳ ಸೇರಿದ ಅಂತರ್ಜಲ ಮೇ ಮೊದಲ ವಾರದಿಂದ ಮಳೆಯಾಗಬಹುದೆಂಬ ನಿರೀಕ್ಷೆ ಇದ್ದರೂ ಮಳೆ ಕೈಕೊಟ್ಟರೆ ಪ್ರಸ್ತುತ ಕೈಹಿಡಿದಿರುವ ಬೋರ್‌ವೆಲ್‌ಗಳು ಕೈಕೊಡುವ ಸಾಧ್ಯತೆ ನಿಚ್ಚಳವಾಗಿದೆ. ಬರಗಾಲದಿಂದ ಕೊಳವೆಬಾವಿಗಳಲ್ಲಿ 10 ಅಡಿಗೂ ಅಧಿಕ ನೀರು ಇಳಿಕೆಯಾಗಿದೆ. ಕೆರೆಕುಂಟೆಗಳಲ್ಲಿ ನೀರು ಖಾಲಿಯಾಗಿದ್ದು, ಜೀವಜಲದ ಮೂಲ ಬತ್ತಿಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್ ಅವಲಂಬನೆ ಅನಿವಾರ್ಯವಾಗಲಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಟೆಂಡರ್ ಕರೆಯಲು ಸಿದ್ದತೆ ನಡೆಸಿದ್ದು ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ನೀರು ಪೂರೈಕೆಗೆ ಟ್ಯಾಂಕರ್‌ಗಳು ಸಜ್ಜಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಪಿಐ ಕೋಟಿಂಗ್ ಕಡ್ಡಾಯ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳು ಕಡ್ಡಾಯವಾಗಿ ಇಪಿಐ ಕೋಟಿಂಗ್ ಹೊಂದಿರಬೇಕು, ಟ್ಯಾಂಕರ್‌ಗಳಲ್ಲಿ ನೀರಿನ ಗುಣಮಟ್ಟ ಕೆಡದಂತೆ ಸಂರಕ್ಷಣೆ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಅಪಾಯಕಾರಿ ರಾಸಾಯನಿಕ ಕ್ರಿಯೆಗಳ ಮೂಲಕ ನೀರು ವಿಷಯುಕ್ತವಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕರೆಯಲಿರುವ ಟೆಂಡರ್‌ನಲ್ಲಿ ಇದು ಪ್ರಮುಖ ಅಂಶವಾಗಲಿದೆ. ಇ-ಟೆಂಡರ್‌ನಲ್ಲಿ ಭಾಗವಹಿಸುವ ಟ್ಯಾಂಕರ್ ಮಾಲೀಕರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು, ಟ್ಯಾಂಕರ್ ನೀರು ಚಾಲನೆ ಬಳಿಕ ಅಧಿಕಾರಿಗಳು ಇದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಜಮೀನುಗಳ ಬೋರ್‌ವೆಲ್ ನೆರವು ಪ್ರಸ್ತುತ ಕೆಲವು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದ್ದು ಇಂಥ ಗ್ರಾಮಗಳಲ್ಲಿ ಜಮೀನುಗಳಲ್ಲಿನ ಕೊಳವೆಬಾವಿಗಳ ಮೂಲಕ ನೀರನ್ನು ಪಂಪ್ ಮಾಡಿಸಿ ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ಟೆಂಡರ್ ಬಳಿಕ ಇದೇ ಮಾದರಿಯಲ್ಲಿ ನೀರು ಖರೀದಿಸಿ ಅವಶ್ಯವಿರುವ ಕಡೆ ಪೂರೈಸಲು ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಟಲ್ ದಾಖಲೆ ಈ ಬಾರಿ ಯಾವುದೇ ಕೈಬರಹದ ಟೆಂಡರ್ ಇರುವುದಿಲ್ಲ, ಡಿಜಿಟಲ್ ಸಿಗ್ನೇಚರ್ ಇರುವ ದಾಖಲೆಗಳನ್ನೇ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವಾಗಬಾರದು, ಹಾಗೆಯೇ ಪಾರದರ್ಶಕವಾಗಿರಬೇಕು ಎಂಬ ಕಾರಣಕ್ಕೆ ಈಬಾರಿ ಇಂಥ ವ್ಯವಸ್ಥೆ ಮಾಡಲಾಗಿದೆ.
ಇಒಗಳಿಗೆ ಸೂಚನೆ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾುರ ಹಾಗೂ ದೇವನಹಳ್ಳಿಯ ಆಯಾ ತಾಲೂಕು ಇಒಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ. ಇಒಗಳು ಟೆಂಡರ್ ಪ್ರಕ್ರಿಯೆ ನಡೆಸಿ ಆಯಾ ತಾಲೂಕುಗಳಿಗೆ ಅವಶ್ಯವಿರುವ ಕಡೆ ನೀರು ಪೂರೈಸಲು ಕ್ರಮಕೈಗೊಳ್ಳಲಿದ್ದಾರೆ.
ಪ್ರಸ್ತುತ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್ ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಇ-ಟೆಂಡರ್ ಕರೆದು ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಆಯಾ ತಾಲೂಕು ಇಒಗಳಿಗೆ ಸೂಚನೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದ್ದು, ಎಲ್ಲವೂ ಪಾರದರ್ಶಕವಾಗಿರಲಿದೆ.
ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ