ಶಿವಮೊಗ್ಗ: ಲೋಕಸಭೆ ಚುನಾವಣೆಯನ್ನು ನಾವು ಸಂಘಟನಾತ್ಮಕವಾಗಿ ಎದುರಿಸಿದ್ದೆವು. ಇದೇ ಮೊದಲ ಬಾರಿಗೆ ಅತ್ಯಧಿಕ ಮತದಾನವಾಗಿದೆ. ದೊಡ್ಡ ಅಂತರದಲ್ಲಿ ಗೆಲ್ಲುವ ನಿರೀಕ್ಷೆಯಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಒಗ್ಗೂಡಿ ಚುನಾವಣೆಯಲ್ಲಿ ಕೆಲಸ ಮಾಡಿದರು. ಮೈತ್ರಿ ಪಕ್ಷದಲ್ಲಿ ಯಾವುದೇ ಅಪಸ್ವರವಿರಲಿಲ್ಲ. ಜೆಡಿಎಸ್ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಕೆಲಸ ಮಾಡಿದ್ದು, ನಮ್ಮ ಪಕ್ಷದ ಕಾರ್ಯಕರ್ತರು ಸ್ವಂತ ಕೆಲಸವನ್ನೂ ಮರೆತು ಕಾರ್ಯನಿರ್ವಹಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಪ್ರತಿ ಚುನಾವಣೆಯೂ ಮಹತ್ವ ಹಾಗೂ ಸವಾಲಿನದ್ದು. ಈ ಬಾರಿ ಅತಿ ಹೆಚ್ಚು ಮತದಾನವಾಗುವಲ್ಲಿ ಅಧಿಕಾರಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಚ್ಚು ಶ್ರಮವಹಿಸಿದ್ದಾರೆ. ಶಿವಮೊಗ್ಗ ಹಾಗೂ ಭದ್ರಾವತಿ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾನ ಆಗಿರುವುದು ಒಳ್ಳೆಯ ಸಂಗತಿ ಎಂದು ಹೇಳಿದರು.
ಚುನಾವಣಾ ಪ್ರಚಾರ ಕಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸಭೆ ನಡೆಸುವ ಮೂಲಕ ಒಟ್ಟು 75 ಬಹಿರಂಗ ಸಭೆಗಳು ನಡೆದವು. ಪಕ್ಷದ ವಿವಿಧ ಮೋರ್ಚಾಗಳಿಂದ ಒಟ್ಟು 1,560 ಸಭೆಗಳನ್ನು ನಡೆಸಲಾಯಿತು. ಜಿಪಂ ಕ್ಷೇತ್ರದ ವ್ಯಾಪ್ತಿಯ ಮಹಾಶಕ್ತಿ ಕೇಂದ್ರದಲ್ಲಿ 220 ಸಭೆ ನಡೆಸಲಾಗಿತ್ತು. ಖುದ್ದು ನಾನು 396 ಸಭೆಗಳಲ್ಲಿ ಭಾಗವಹಿಸಿದ್ದೆ. ರಾಜ್ಯಮಟ್ಟದ ನಾಯಕರು 21 ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
ನಮ್ಮ ಮತದಾರರು ಹೃದಯ ವೈಶಾಲ್ಯ ಉಳ್ಳವರು. ಅವರು ಬಿಜೆಪಿ ಹಾಗೂ ನನ್ನ ಬಗ್ಗೆ ಎಷ್ಟು ಪ್ರೀತಿ ಹೊಂದಿದ್ದಾರೋ ಅಷ್ಟು ಪ್ರಮಾಣದಲ್ಲಿ ನನ್ನ ಗೆಲುವಿನ ಅಂತರ ಹೆಚ್ಚಲಿದೆ. ಪ್ರಧಾನಿ ಮೋದಿ ನಮ್ಮ ನಾಯಕ. ಅವರ ಹೆಸರಿನಲ್ಲಿ, ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಯಾಚಿಸಿದ್ದೆ ಎಂದರು.
ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಪ್ರಮುಖರಾದ ಎಸ್.ದತ್ತಾತ್ರಿ ಇತರರಿದ್ದರು.