ಸಕಲೇಶಪುರ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಪಿಎಂಎವೈ ಯೋಜನೆ ಕುರಿತು ಸಂಸದ ಶ್ರೇಯಸ್ ಪಟೇಲ್ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಬಳಿಕ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಮುಖ ಹಾಗೂ ಆಶಾದಾಯಕ ಯೋಜನೆಯಾಗಿದೆ. ಇದರಡಿ ಸಮೀಕ್ಷೆ, ನೋಂದಣಿ ಹಾಗೂ ಪ್ರಗತಿ ಬಗ್ಗೆ ಜಿಲ್ಲಾದ್ಯಂತ ಸಭೆ ನಡೆಸಲಾಗುತ್ತಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ನೋಂದಣಿ ಆಗಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಚುರುಕು ಮಾಡುವಂತೆ ಹೇಳಿದರು.
ಪುರಸಭೆ ವ್ಯಾಪ್ತಿಯಲ್ಲಿ ಯಾರು ನಿವೇಶನ ರಹಿತರಿದ್ದಾರೋ ಹಾಗೂ ನಿವೇಶನ ಹೊಂದಿ ಮನೆ ಕಟ್ಟಿಲ್ಲವೋ ಅಂತಹವರನ್ನು ಸರ್ವೇ ಮೂಲಕ ಗುರುತಿಸುವಂತೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಸೂಚಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಕನಿಷ್ಠ 3 ಸಾವಿರ ನೋಂದಣಿ ಆಗಬೇಕು. ಈ ಯೋಜನೆಯಡಿ ಅರ್ಹರಿಗೆ 1.80 ಲಕ್ಷ ರೂ. ನೆರವು ಸಿಗಲಿದೆ. ಕೇಂದ್ರದ ಯೋಜನೆ ಸಫಲ ಆಗಬೇಕಾದರೆ, ಅಧಿಕಾರಿಗಳು ಮತ್ತು ಸದಸ್ಯರು ಸೇರಿ ಅರ್ಹ ಫಲಾನುಭವಿಗಳನ್ನು ಹುಡುಕಿ ನೋಂದಣಿ ಮಾಡಿಸಬೇಕು ಎಂದು ಸಲಹೆ ನೀಡಿದರು.
ಎಲ್ಲರನ್ನೂ ಪ್ರಮುಖ ಎಂದು ಪರಿಗಣಿಸಬೇಕು. ಯಾವುದೇ ಯೋಜನೆ ಉತ್ತಮ ರೀತಿಯಲ್ಲಿ ಅನುಷ್ಠಾನವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆ ತರಲು ಅನುಕೂಲವಾಗಲಿದೆ ಎಂದರು.
ಪುರಸಭೆ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್, ಉಪಾಧ್ಯಕ್ಷೆ ಝರೀನಾ, ಮುಖ್ಯಾಧಿಕಾರಿ ಪರಮೇಶ್ವರಪ್ಪ ಇತರರು ಇದ್ದರು. ಬಳಿಕ ಸಮಸ್ಯೆ ಹೇಳಿಕೊಂಡು ಬಂದವರಿಂದ ಸಂಸದರು ಅಹವಾಲು ಸ್ವೀಕಾರ ಮಾಡಿದರು.