ಚಿಕ್ಕಬಳ್ಳಾಪುರ: ತಾಲೂಕಿನ ಪುರಾಣ ಪ್ರಸಿದ್ಧ ರಂಗಸ್ಥಳದ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಸುತ್ತಲು ಪ್ರದೇಶದಲ್ಲಿ ಅಭಿವೃದ್ಧಿ, ಪ್ರವಾಸಿಗರಿಗೆ ಮೂಲ ಸೌಕರ್ಯವನ್ನು ಒದಗಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ತಿಪ್ಪೇನಹಳ್ಳಿ ಮಾರ್ಗವಾಗಿ ದೇವಾಲಯಕ್ಕೆ ಸಾಗುವ ರಸ್ತೆಯ ಅಭಿವೃದ್ಧಿ, ಅಕ್ರಮ ಒತ್ತುವರಿಯಾಗದಿರಲು ದೇವಸ್ಥಾನದ ಜಾಗದ ರಕ್ಷಣೆಗೆ ಕಾಂಪೌಂಡ್, ಇಲ್ಲಿಗೆ ಬರುವ ಜನರಿಗೆ ಅನಗುಣವಾಗಿ ಸೂಕ್ತ ಶೌಚಗೃಹಗಳು, ಗ್ರಾಮದ ಪ್ರವೇಶದ್ವಾರದಲ್ಲಿ ದೇಗುಲದ ಬಗ್ಗೆ ಸಮರ್ಪಕ ಮಾಹಿತಿ ನೀಡುವ ಆಕರ್ಷಕ ಸ್ವಾಗತ ಕಮಾನು ನಿರ್ಮಾಣ, ದೇವಾಲಯದಲ್ಲಿ ಸುರಕ್ಷತೆಯಿಂದ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಅನುಕೂಲಕರ ವಿವಿಧ ಸೌಕರ್ಯವನ್ನು ಒದಗಿಸಬೇಕು ಎಂಬುದು ಭಕ್ತರ ಒತ್ತಾಯವಾಗಿದೆ.
*ಅನೈತಿಕ ಚಟುವಟಿಕೆ
ರಂಗಸ್ಥಳ ದೇವಾಲಯದ ಸುತ್ತಲು ಗಿಡಮರಗಳು ಬೆಳೆದಿದ್ದು ನಾಲ್ಕು ದಿಕ್ಕಿನಲ್ಲಿಯೂ ಬಯಲು ಪ್ರದೇಶ ಇದೆ. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು ಪುಂಡರು ಮದ್ಯಸೇವನೆ, ಮೋಜು ಮಸ್ತಿ ಪಾರ್ಟಿಯಲ್ಲಿ ತೊಡಗಿ ಪವಿತ್ರತಾಣಕ್ಕೆ ಚ್ಯುತಿ ತರುತ್ತಿದ್ದಾರೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕಾಗಿದೆ.
*ರಂಗಸ್ಥಳ ದೇವಾಲಯ
ಚಿಕ್ಕಬಳ್ಳಾಪುರ ನಗರದಿಂದ ಗೌರಿಬಿದನೂರು ಮಾರ್ಗದ ರಸ್ತೆಯಲ್ಲಿ 4 ಕಿ.ಮೀ ದೂರದಲ್ಲಿರುವ ತಿಪ್ಪೇನಹಳ್ಳಿ ಸಮೀಪ ರಂಗಸ್ಥಳ ಇದೆ. ಇಲ್ಲಿನ ಶ್ರೀ ರಂಗನಾಥ ಸ್ವಾಮಿ ದೇವಾಲಯವು ಪುರಾಣ ಪ್ರಸಿದ್ಧವಾಗಿದೆ. ಸಪ್ತರ್ಷಿಗಳು ಭಗವಾನ್ ರಂಗನಾಥನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಹೊಯ್ಸಳರು ಸೇರಿದಂತೆ ರಾಜಮಹಾರಾಜರ ಕಾಲದಲ್ಲಿ ದೇಗುಲವು ಅಭಿವೃದ್ಧಿ ಹೊಂದಿದ್ದು ಕಲ್ಲಿನಲ್ಲಿ ಕೆತ್ತಲಾಗಿರುವ ಕಲೆಯು ಮನಮೋಹಕವಾಗಿದೆ. ಇಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಂದು ಮುಂಜಾವದಲ್ಲಿ ಸೂರ್ಯನ ಕಿರಣಗಳು ಪವಡಿಸಿರುವ ಶ್ರೀ ಭೂದೇವಿ ರಂಗನಾಥಸ್ವಾಮಿಯ ಪಾದವನ್ನು ಸ್ಪರ್ಶಿಸುತ್ತವೆ. ಇನ್ನು ಶ್ರೀರಂಗಪಟ್ಟಣದಲ್ಲಿನ ಆದಿರಂಗ, ಶಿಂಷಾದಲ್ಲಿನ ಮಧ್ಯರಂಗ, ತಮಿಳುನಾಡಿ ಶ್ರೀರಂಗಂನಲ್ಲಿನ ಅಂತ್ಯ ರಂಗ ದರ್ಶನ ಪಡೆದ ಬಳಿಕ ಇಲ್ಲಿನ ರಂಗಸ್ಥಳದಲ್ಲಿನ ದೇವರನ್ನು ನೋಡಿದಾಗ ಮೋಕ್ಷ ಲಭಿಸುತ್ತದೆ ಎಂಬ ಮಾತಿದೆ.
*ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಲು, ಸಮರ್ಪಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದರ ಬಗ್ಗೆ ಈಗಾಗಲೇ ಸಂಸದರು, ಸಚಿವರು, ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ತ್ವರಿತವಾಗಿ ಸ್ಪಂದಿಸುವ ನಿರೀಕ್ಷೆ ಇದೆ.
ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಹೋರಾಟಗಾರ