ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ಸ್ಥಳಿಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಆಸ್ತಿಗಳ ನಿಯಮಾನುಸಾರ ಸಕ್ರಮಕ್ಕೆ ಆಡಳಿತ ಯಂತ್ರಾಂಗವು ಸಿದ್ಧತೆ ಕೈಗೊಳ್ಳುತ್ತಿರುವುದರ ನಡುವೆ ಸಮಸ್ಯೆ ಪರಿಹಾರಕ್ಕೆ ಮಾಲೀಕರು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.
ಹೌದು! ರಾಜ್ಯ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಖಾತೆಯನ್ನು ನೀಡಿ, ತೆರಿಗೆ ಸಂಗ್ರಹಿಸಲು ಆದೇಶಿಸಿದೆ. ಇದಕ್ಕೆ ಅಲಾರ್ಟ್ ಆಗಿರುವ ಸಂಬಂಧಪಟ್ಟ ಅಧಿಕಾರಿಗಳು, ಆಯಾ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ ಕೈಗೊಂಡು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಗೊಂದಲವನ್ನು ಬಗೆಹರಿಸಿಕೊಂಡು ಇಲಾಖೆಯ ಮಾರ್ಗಸೂಚಿ ಅನ್ವಯ ಕೆಲಸ ಮುಗಿಸಲು ಮುಂದಾಗಿದ್ದಾರೆ.
ಸರ್ಕಾರಿ ಇ ತಂತ್ರಾಂಶದಲ್ಲಿ ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ 32005 ಅಧಿಕೃತ, 10,065 ಅನಧಿಕೃತ ಆಸ್ತಿಗಳು ನಮೂದಾಗಿವೆ. ಇದರ ನಡುವೆ ಭೂ ಪರಿವರ್ತನೆ ಇಲ್ಲದೇ ಕೃಷಿ ಜಾಗದಲ್ಲಿ ಕಟ್ಟಡಗಳ ನಿರ್ಮಾಣ, ಪ್ರಾಧಿಕಾರಗಳ ಅನುಮೋದನೆ ಪಡೆಯದೇ ಬಡಾವಣೆಗಳ ನಿರ್ಮಾಣ, ನಿವೇಶನಗಳ ವಿಂಗಡಣೆ ಸೇರಿದಂತೆ ಸಾಕಷ್ಟು ಅನಧಿಕೃತ ಆಸ್ತಿಗಳು ಇವೆ. ನಿಯಮಾನುಸಾರ ಖಾತೆಯನ್ನು ಹೊಂದಿಲ್ಲ. ಇದರಿಂದ ಆಸ್ತಿ ಮಾರಾಟ, ನೋಂದಣಿ ಜತೆಗೆ ಇತರ ವಹಿವಾಟಿಗೆ ತೊಂದರೆಯಾಗುತ್ತಿದೆ. ಹಾಗೆಯೇ ಅನಧಿಕೃತ ಆಸ್ತಿಗಳಿಂದ ಸ್ಥಳಿಯ ಆಡಳಿತ ಸಂಸ್ಥೆಗಳಿಗೆ ಯಾವುದೇ ತೆರಿಗೆ ಸಿಗುತ್ತಿಲ್ಲ. ಆದರೆ, ಇಂತಹವುಗಳಿಗೂ ಸರ್ಕಾರಿ ಸವಲತ್ತು ಸಿಗುತ್ತಿದೆ.
ಇದರಿಂದ ಆದಾಯ ಖೋತಾದಲ್ಲಿ ಸ್ಥಳಿಯ ಆಡಳಿತ ಸಂಸ್ಥೆಗಳ ಅಭಿವೃದ್ಧಿ ಕೆಲಸಗಳ ನಿರ್ವಹಣೆಗೆ ತೊಡಕಾಗಿದೆ.
*ಮಾರ್ಗಸೂಚಿ ನಿಯಮಗಳು
ಈಗಾಗಲೇ ರಾಜ್ಯ ಮಟ್ಟದಲ್ಲಿ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ನಿಯಮಗಳನ್ನು ಪ್ರಕಟಿಸಲಾಗಿದೆ. ಇದರನ್ವಯ ಅಗತ್ಯ ಪ್ರಕ್ರಿಯೆ ನಿರ್ವಹಣೆಗೆ ಜಿಲ್ಲಾಡಳಿತಗಳಿಗೆ ಆದೇಶಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಸಭೆಯನ್ನು ಕೈಗೊಂಡು ಸ್ಥಳಿಯ ಆಡಳಿತ ಸಂಸ್ಥೆಗಳೊಂದಿಗೆ ಡಿಸಿ ಚರ್ಚಿಸಲಿದ್ದು ಫೆ.20 ರ ಬಳಿಕ ಖಾತೆ ವಿತರಣೆಯಾಗುವ ನಿರೀೆಕ್ಷೆ ಹೊಂದಲಾಗಿದೆ.
*ಅನಧಿಕೃತ ಆಸ್ತಿಗಳ ಆದಾಯ
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ 6 ಸಾವಿರ ಅನಧಿಕೃತ ಆಸ್ತಿಗಳನ್ನು ಸರ್ವೇ ಪ್ರಕಾರ ಗುರುತಿಸಲಾಗಿದೆ. ಆದರೆ, ವಾಸ್ತವವಾಗಿ ಇದು 15 ಸಾವಿರಕ್ಕಿಂತಲೂ ಹೆಚ್ಚು ಇದೆ ಎನ್ನುವುದು ಅಧಿಕಾರಿಗಳು ಮಾತು. ಜಿಲ್ಲೆಯ ಉಳಿದ ಭಾಗಗಳಲ್ಲಿನ ಅನಧಿಕೃತ ಆಸ್ತಿಗಳು ಸಾವಿರಾರು ಲೆಕ್ಕದಲ್ಲಿದ್ದು ಇವುಗಳ ಸಕ್ರಮದಿಂದ ಸರ್ಕಾರಕ್ಕೆ ಒಳ್ಳೆಯ ಆದಾಯ ಸಿಗಲಿದೆ. ಜನರಿಗೂ ಅನುಕೂಲವಾಗಲಿದೆ.
*ಆಸ್ತಿ ಗುರುತಿನ ಸಂಖ್ಯೆ
ಇ ತಂತ್ರಾಂಶದಲ್ಲಿ ಸ್ವತ್ತಿನ ಗುರುತಿನ ಸಂಖ್ಯೆಯನ್ನು ನೀಡಲು ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ 6735 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 1585 ಆಸ್ತಿಗಳ ಕರಾರು ಪತ್ರವನ್ನು ಅಪ್ ಡೇಟ್ ಮಾಡಲಾಗಿದೆ.