ಜಿಲ್ಲೆ

ಸರ್ಕಾರಿ ಶಾಲೆಗಳಿಗೆ ಶುಕ್ರದೆಸೆ!, ಪ್ರಸಕ್ತ ಸಾಲಿನಲ್ಲಿ ದಾಖಲಾತಿ ಹೆಚ್ಚಳ ನಿರೀಕ್ಷೆ ವಿದ್ಯಾಗಮ ಯೋಜನೆಯಲ್ಲಿ ದಾಖಲಾತಿ ಆರಂಭ

Bengaluru Rural

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಸುದೀರ್ಘ ಲಾಕ್‌ಡೌನ್ ತಂದಿಟ್ಟ ಆರ್ಥಿಕ ಸಂಕಷ್ಟ ಮತ್ತೊಂದು ರೂಪದಲ್ಲಿ ಸರ್ಕಾರಿ ಶಾಲೆಗಳಿಗೆ ಶುಕ್ರದೆಸೆ ತರಲಿದೆಯೇ? ನಗರ ಪ್ರದೇಶಗಳಲ್ಲಿ ಉದ್ಯೋಗ ಕಳೆದುಕೊಂಡು ಸ್ವಗ್ರಾಮಗಳಿಗೆ ಮರಳಿರುವ ಬಹುತೇಕ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಿರುವುದು ಇಂಥದ್ದೊಂದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ತಗ್ಗುತ್ತಿರುವ ಆತಂಕದ ನಡುವೆ ಪ್ರಸಕ್ತ ಸಾಲಿನಲ್ಲಿ ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

ವಿದ್ಯಾಗಮದಡಿ ಹೊಸ ದಾಖಲಾತಿ: ರಾಜ್ಯ ಸರ್ಕಾರ ರೂಪಿಸಿರುವ ವಿದ್ಯಾಗಮ ಹೆಸರಿನಡಿ ಹೊಸ ಕಲಿಕಾ ಕಾರ್ಯಕ್ರಮದಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸುವುದು ಪ್ರಮುಖವಾಗಿದೆ. ಇದರನ್ವಯ ಜಿಲ್ಲೆಯಲ್ಲಿ ಶಿಕ್ಷಕರು ಮನೆ ಮನೆ ಭೇಟಿ ಆರಂಭಿಸಿದ್ದು, ಕಳೆದ ಸಾಲಿನ ವಿದ್ಯಾರ್ಥಿಗಳ ಮರುದಾಖಲೆ ಜತೆಗೆ ಹೊಸದಾಗಿ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ. ಕಳೆದೆರಡು ದಿನಗಳಿಂದ ಆರಂಭವಾಗಿರುವ ಈ ದಾಖಲಾತಿ ಪ್ರಕ್ರಿಯೆಯಲ್ಲಿ ಹೊಸ ವಿದ್ಯಾರ್ಥಿಗಳ ಸೇರ್ಪಡೆಯಾಗುತ್ತಿರುವುದು ಕಂಡುಬರುತ್ತಿದೆ.

ಅದರಲ್ಲೂ ಬೆಂಗಳೂರು ಸೇರಿ ವಿವಿಧ ಕಡೆಯ ಪಟ್ಟಣ ಪ್ರದೇಶಗಳಿಂದ ಮರಳಿ ಸ್ವಗ್ರಾಮಕ್ಕೆ ಬಂದಿರುವ ಬಹುತೇಕ ಮಕ್ಕಳು ಹೊಸದಾಗಿ ಶಾಲೆಗಳಿಗೆ ದಾಖಲಾಗುತ್ತಿರುವುದು ಹೊಸ ಬೆಳವಣಿಗೆ.

ಜಿಲ್ಲೆಯಲ್ಲಿಯೇ ನೆಲೆ: ಬೆಂಗಳೂರಿನ ಹಲವು ಕಡೆಗಳಲ್ಲಿ ನೆಲೆಸಿದ್ದ ಜಿಲ್ಲೆಯ ಹಲವು ಮಂದಿ ಸ್ವಗ್ರಾಮಗಳಿಗೆ ಮರಳಿದ್ದಾರೆ. ಇಲ್ಲಿಯೇ ನೆಲೆನಿಲ್ಲಲು ಸಿದ್ಧರಾಗಿದ್ದಾರೆ. ಹಲವರು ಕೃಷಿ, ಹೈನುಗಾರಿಕೆ ಸೇರಿ ಜಿಲ್ಲೆಯಲ್ಲೇ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಸ್ಥಳೀಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡಿಸಲು ಪಾಲಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಆರ್ಥಿಕ ಸಂಕಷ್ಟವೂ ಕಾರಣ: ಗ್ರಾಮಾಂತರ ಜಿಲ್ಲೆಯಲ್ಲಿಯೂ ಹಲವು ಪ್ರತಿಷ್ಠಿತ ಖಾಸಗಿ ಶಾಲೆಗಳಿವೆ. ಆದರೆ ಆರ್ಥಿಕ ಸಂಕಷ್ಟದಿಂದ ಜರ್ಜರಿತರಾಗಿರುವ ಹಲವು ಮಂದಿ ಸರ್ಕಾರಿ ಶಾಲೆಗಳತ್ತ ಒಲವು ತೋರಿಸುತ್ತಿದ್ದಾರೆ. ಜತೆಗೆ ಪ್ರಸ್ತುತ ಸರ್ಕಾರಿ ಶಾಲೆಗಳು ಹೈಟೆಕ್ ಆಗಿವೆ. ಖಾಸಗಿ ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದೆ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ನುರಿತ ಶಿಕ್ಷಕರು, ಕಂಪ್ಯೂಟರ್ ಕೊಠಡಿ, ಆಟದ ಮೈದಾನ ಸೇರಿ ಉತ್ತಮ ವಾತಾವರಣವಿರುವ ಕಟ್ಟಡಗಳು ಮಕ್ಕಳನ್ನು ಕೈಬೀಸಿ ಕರೆಯುತ್ತಿವೆ.

ರಾಜ್ಯಕ್ಕೆ 3ನೇ ಸ್ಥಾನ: ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿತ್ತು. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಗುಣಮುಟ್ಟ ಉತ್ತಮಗೊಳ್ಳುತ್ತಿವೆ. ವಿದ್ಯಾರ್ಥಿಗಳು ಹಾಗೂ ಪಾಲಕರಿಂದಲೂ ಸರ್ಕಾರಿ ಶಾಲೆಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇವೆಲ್ಲ ಕಾರಣದಿಂದಲೂ ದಾಖಲಾತಿ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಶಾಲೆಗೆ ಮರಳಿದ ಶಿಕ್ಷಕರು: ಸುದೀರ್ಘ ರಜೆ ಬಳಿಕ ಶಿಕ್ಷಕರು ವಿದ್ಯಾಗಮ ಯೋಜನೆ ಅನುಷ್ಠಾನಕ್ಕೆ ಶಾಲೆಗಳಿಗೆ ಮರಳಿದ್ದಾರೆ. ಧೂಳು ಹಿಡಿಯುತ್ತಿದ್ದ ಶಾಲೆಗಳು ಸ್ವಚ್ಛಗೊಳ್ಳುತ್ತಿವೆ. ಮತ್ತೆ ಮಕ್ಕಳ ಕಲರವ ಕೇಳುವ ತವಕ ಹುಟ್ಟುಹಾಕಿದೆ. ಇದರ ನಡುವೆ ಶಿಕ್ಷಕರು ವಿದ್ಯಾರ್ಥಿಗಳನ್ನು ಶಾಲಾ ಆವರಣ, ಸಮುದಾಯ ಭವನ ಸೇರಿ ಆಯ್ದ ಜಾಗಗಳಲ್ಲಿ ಕರೊನಾ ನಿಯಮದಡಿ ಕಲಿಕಾ ಚಟುವಟಿಕೆ ಆರಂಭಿಸಿರುವುದು ಕಂಡುಬರುತ್ತಿದೆ.

ಕರೊನಾ ಲಾಕ್‌ಡೌನ್‌ನಿಂದಾಗಿ ಸ್ವಗ್ರಾಮಗಳತ್ತ ಮರಳಿದವರಲ್ಲಿ ಅನೇಕರು ಇಲ್ಲಿಯೇ ನೆಲೆನಿಂತಿದ್ದಾರೆ. ಇದರಿಂದ ಅನೇಕ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ವಿದ್ಯಾಗಮ ಯೋಜನೆಯಡಿ ಆರಂಭಿಸಿರುವ ದಾಖಲಾತಿ ಪ್ರಕ್ರಿಯೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಗಂಗಮಾರೇಗೌಡ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ