ಜಿಲ್ಲೆ

ಉಳ್ಳಾಗಡ್ಡಿಗೆ ಬಂಪರ್ ಬೆಲೆ ನಿರೀಕ್ಷೆ

ವೀರೇಶ ಸೌದ್ರಿ

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ನೀರಾವರಿ ಹಾಗೂ ಅಲ್ಪಸ್ವಲ್ಪ ಮಳೆಯಿಂದ ಉಳ್ಳಾಗಡ್ಡಿ ಬೆಳೆದಿರುವ ಅನ್ನದಾತರರಿಗೆ ಈ ಬಾರಿ ಬಂಪರ್ ಬೆಲೆ ದೊರೆಯುವ ನಿರೀಕ್ಷೆಯಿದೆ.
ಸದ್ಯ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಉಳ್ಳಾಗಡ್ಡಿಗೆ 2 ಸಾವಿರ ರೂ.ನಿಂದ 3 ಸಾವಿರ ರೂ.ವರೆಗೂ ದರವಿದೆ. ಮುಂದಿನ ದಿನದಲ್ಲಿ ಬೆಲೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ.

ಸತತ ಬೆಲೆ ಕುಸಿತ ಹಾಗೂ ಅತಿವೃಷ್ಟಿಯಿಂದ ಉಳ್ಳಾಗಡ್ಡಿ ಬೆಳೆ ಕೈ ಸುಟ್ಟುಕೊಂಡಿದ್ದ ಬೆಳೆಗಾರರು ಈ ಬಾರಿ ಉಳ್ಳಾಗಡ್ಡಿ ಬದಲು ಮೆಕ್ಕೆಜೋಳ ಹೆಚ್ಚಾಗಿ ಬೆಳೆದಿದ್ದಾರೆ. ಅಲ್ಲದೆ ಕೆಲ ರೈತರು ಉಳ್ಳಾಗಡ್ಡಿ ಬೆಳೆದಿದ್ದರೂ ಮಳೆ ಕೊರತೆಯಿಂದ ಸರಿಯಾಗಿ ಬೆಳೆ ಬಂದಿಲ್ಲ. ಇದರ ನಡುವೆಯೂ ಕೆಲ ಬೆಳೆಗಾರರು ಟ್ರಾೃಕ್ಟರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಅವರಿಗೆ ಉಳ್ಳಾಗಡ್ಡಿ ಶುಕ್ರದೆಸೆ ತಂದುಕೊಡಲಿದೆ.

10 ಸಾವಿರದಿಂದ 650ಕ್ಕೆ ಕುಸಿತ

ಕಳೆದ ವರ್ಷ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್‌ನಷ್ಟು ಉಳ್ಳಾಗಡ್ಡಿ ಬೆಳೆಯಲಾಗಿತ್ತು. ಆದರೆ, ಕೊಳೆ ರೋಗ, ಅತಿವೃಷ್ಟಿ ಹಾಗೂ ಬೆಲೆ ಕುಸಿತದಿಂದ ಕಂಗೆಟ್ಟು ಹೋಗಿದ್ದ ಬೆಳೆಗಾರರು ಉಳ್ಳಾಗಡ್ಡಿ ಬೆಳೆಯುವುದನ್ನು ಕೈ ಬಿಟ್ಟಿದ್ದಾರೆ. ಇದರ ಪರಿಣಾಮವಾಗಿ ತಾಲೂಕಿನಲ್ಲಿ 650 ಹೆಕ್ಟೇರ್‌ನಷ್ಟು ಮಾತ್ರ ಉಳ್ಳಾಗಡ್ಡಿ ಬೆಳೆಯಲಾಗಿದೆ. ಅದರಲ್ಲಿ ಮಳೆ ಕೊರತೆಯಿಂದ 450 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಲಾಗಿದೆ. ಹೀಗಾಗಿ, ಈ ಬಾರಿ ಉಳ್ಳಾಗಡ್ಡಿ ಬೆಳೆದ ರೈತರಿಗೆ ಬಂಪರ್ ಬೆಲೆ ದೊರೆಯುವ ನಿರೀಕ್ಷೆಯಿದೆ.

ಗೂಡು ಹಾಕುತ್ತಿರುವ ರೈತರು

ತಾಲೂಕಿನ ಹಲಗೇರಿ, ಕುಪ್ಪೇಲೂರ, ಗಂಗಾಪುರ, ಯರೇಕುಪ್ಪಿ, ಉಕ್ಕುಂದ, ಸರ್ವಂದ ಮತ್ತಿತರ ಗ್ರಾಮಗಳ ಬೆರಳೆಣಿಕೆಯಷ್ಟು ರೈತರು ಈ ಬಾರಿ ಉಳ್ಳಾಗಡ್ಡಿ ಬೆಳೆದಿದ್ದಾರೆ. ಕೆಲವರ ಬೆಳೆ ಸಂಪೂರ್ಣ ಹಾಳಾಗಿದ್ದರೆ, ಕೆಲ ರೈತರು ನೀರು ಒದಗಿಸಿ ಬೆಳೆದಿದ್ದಾರೆ.
ಆದರೆ, ಸದ್ಯ ಜಿಟಿಜಿಟಿ ಮಳೆಯಾಗುತ್ತಿರುವ ಹಾಗೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಆ ಬೆಳೆ ಕೂಡ ಹಾಳಾಗುವ ಆತಂಕ ರೈತರಲ್ಲಿ ಮೂಡಿದೆ. ಆದ್ದರಿಂದ ಉಳ್ಳಾಗಡ್ಡಿಯನ್ನು ಕಿತ್ತು ಗೂಡು ಹಾಕುತ್ತಿದ್ದಾರೆ.

ಇನ್ನೂ ಹೆಚ್ಚಾಗಬಹುದು…

ಕಳೆದ 2020ರ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಮಹಾರಾಷ್ಟ್ರದ ನಾಸಿಕ್ ಸೇರಿ ವಿವಿಧೆಡೆ ನೆರೆಹಾವಳಿ ಉಂಟಾದ ಕಾರಣ ಉಳ್ಳಾಗಡ್ಡಿಗೆ ಭಾರಿ ಡಿಮಾಂಡ್ ಬಂದಿತ್ತು. ಆದರೆ, ಇದಾದ ಎರಡು ವರ್ಷದಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಸಂಪೂರ್ಣ ನೆಲಕಚ್ಚಿತ್ತು. 1 ಕ್ವಿಂಟಾಲ್‌ಗೆ 200 ರೂ.ನಿಂದ 1200 ರೂ.ವರೆಗೂ ಬೆಲೆ ಕುಸಿತ ಕಂಡಿತ್ತು. ಆದರೆ, ಈ ವರ್ಷ ಸದ್ಯ 1 ಕ್ವಿಂಟಾಲ್‌ಗೆ 3 ಸಾವಿರ ರೂ.ವರೆಗೆ ಬೆಲೆಯಿದೆ. ಬೆಲೆ ಇನ್ನೂ ಏರಿಕೆಯಾಗಲಿದೆ ಎನ್ನುವ ನಂಬಿಕೆ ವ್ಯಾಪಾರಸ್ಥರದು.

ಮಳೆಯ ಕೊರತೆಯಿಂದ ಉಳ್ಳಾಗಡ್ಡಿ ಬೆಳೆಯುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು ಬಹಳ ಕಷ್ಟವಾಗಿತ್ತು. ಆದರೂ ಅಲ್ಪಸ್ವಲ್ಪ ಉಳ್ಳಾಗಡ್ಡಿ ಉಳಿದುಕೊಂಡಿದೆ. ಅದನ್ನು ಉಳಿಸಿಕೊಳ್ಳಲು ಕಿತ್ತು ಗೂಡು ಹಾಕಿದ್ದೇವೆ. ಆದರೆ, ಈ ಹಿಂದೆ ಬಾರದ ಮಳೆ ಈಗ ಬರಬಾರದು. ಮಳೆ ಹೆಚ್ಚಾದರೆ ಉಳ್ಳಾಗಡ್ಡಿ ನೀರು ಪಾಲಾಗಲಿದೆ.I ವಿಶ್ವನಾಥ ಹೊಳಲ, ಉಳ್ಳಾಗಡ್ಡಿ ಬೆಳೆಗಾರ ಸದ್ಯ ಸ್ಥಳೀಯವಾಗಿ ಉಳ್ಳಾಗಡ್ಡಿ ಹೆಚ್ಚಾಗಿ ಬೆಳೆಯದ ಕಾರಣ ಹಾಗೂ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಉಳ್ಳಾಗಡ್ಡಿ ಬಾರದ ಹಿನ್ನೆಲೆಯಲ್ಲಿ 1 ಕ್ವಿಂಟಾಲ್ ಉಳ್ಳಾಗಡ್ಡಿ 1800 ರೂ.ನಿಂದ 3 ಸಾವಿರ ರೂ.ವರೆಗೂ ಮಾರಾಟವಾಗುತ್ತಿದೆ. ನಿತ್ಯವೂ 100 ಚೀಲದಷ್ಟು ಆವಕ ಆಗುತ್ತಿದೆ. ಮುಂದೆ ಇನ್ನೂ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.I ಪರಮೇಶ ನಾಯಕ, ಎಪಿಎಂಸಿ ಸಹಾಯಕ ಕಾರ್ಯದರ್ಶಿ