ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ ಕೆ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ನಡುವೆ ಸತ್ಯಾಸತ್ಯತೆಯ ವಿಚಾರದಲ್ಲಿ ನಂದಿಯ ದೇಗುಲದಲ್ಲಿ ದೀಪ ಹಚ್ಚುವ ವಾಕ್ಸಮರ ಜೋರಾಗಿದೆ.
ಕ್ಷೇತ್ರದಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ ಎಂಬುದರ ಸಾಬೀತು ವಿಚಾರವಾಗಿ ಶ್ರೀ ಭೋಗನಂದೀಶ್ವರ ದೇವಸ್ಥಾನದಲ್ಲಿ ದೀಪ ಹಚ್ಚಿ ಪ್ರಮಾಣಕ್ಕೆ ಸಿದ್ಧ. ಇಲ್ಲವಾಗಿದ್ದಲ್ಲಿ ಈಗಿನ ಶಾಸಕರು ಪ್ರಮಾಣ ಮಾಡಲಿ, ಆಲಯಕ್ಕೆ ಬಂದು ದೀಪ ಬೆಳಗಿಸಲಿ ಎಂದು ಇತ್ತೀಚೆಗೆ ಮಾಜಿ ಸಚಿವರು ಸವಾಲು ಹಾಕಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರದೀಪ್ ಈಶ್ವರ್, ಕರೊನಾದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂಬುದಾಗಿ ಸುಧಾಕರ್ ಹೇಳಿ, ದೇಗುಲದಲ್ಲಿ ದೀಪವನ್ನು ಬೆಳಗಿಸಲಿ ಎಂದು ಪ್ರತಿ ಸವಾಲು ಹಾಕಿದ್ದಾರೆ.
ಇಬ್ಬರು ಸಹ ದೀಪದಿಂದ ದೀಪವ, ಹಚ್ಚಬೇಕು ಮಾನವಾ ಸಿನಿಮಾ ಹಾಡನ್ನು ಹೇಳಿಕೊಂಡು ಪ್ರಮಾಣ ಮಾಡೋಣ ಎಂತಲೂ ಹಾಸ್ಯ ಚಟಾಕಿ ಹಾರಿಸಿದ್ದಾರೆ.
*ಕರೊನಾದಲ್ಲಿ ಅವ್ಯವಹಾರ
ಕರೊನಾ ಅಲೆಯ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ ಅವ್ಯವಹಾರ ನಡೆದಿದೆ. ಇದು ಅಸತ್ಯ ಎಂದು ಮಾಜಿ ಸಚಿವರು ಹೇಳಲಿ ನೋಡೋಣ, ದೇಗುಲಕ್ಕೆ ದಾಖಲೆ ಸಮೇತ ಬಂದು ಪ್ರಮಾಣ ಮಾಡಲಾಗುವುದು. ಈಗಾಗಲೇ ಸರ್ಕಾರ ಸಹ ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಲು ಚಿಂತಿಸಿದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.
ಪ್ರಭಾವಿ ಮಾಜಿ ಸಚಿವರ ಜತೆಗೆ ದೊಡ್ಡ ನಾಯಕರು, ಅಪಾರ ಪ್ರಮಾಣದ ದುಡ್ಡು ಇದ್ದರೂ ಸಹ ಏಕೆ ಚುನಾವಣೆಯಲ್ಲಿ ಸೋತಿದ್ದು? ಜನರ ಎದುರು ಅವರ ಪರಿಣಿತ ರಾಜಕೀಯ ಏಕೆ ನಡೆಯಲಿಲ್ಲ? ನನಗೆ 90 ಸಾವಿರ ಮಂದಿ ಮತ ಹಾಕಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ. ಪ್ರತಿಷ್ಠೆಯ ನಾಯಕತ್ವಕ್ಕಿಂತಲೂ ಒಳ್ಳೆಯ ಕೆಲಸಗಳ ಮೂಲಕ ಜನರನ್ನು ತಲುಪುವುದು ಮುಖ್ಯ ಎಂದು ಶಾಸಕರು ತಿಳಿಸಿದರು.