ಜಿಲ್ಲೆ

ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಸುಧಾಕರ್ ಕತ್ತೆಯಾಗಿದ್ದರಾ?

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಕರೊನಾ ಸಂಕಷ್ಟದ ಸಂದರ್ಭದಲ್ಲೂ ಪೀಡಿಸಿದಕ್ಕೆ ಜನರು ಹಾಕಿರುವ ಶಾಪದಿಂದಲೇ ಮಾಜಿ ಸಚಿವ ಡಾ ಕೆ.ಸುಧಾಕರ್ ಈ ಸ್ಥಿತಿಗೆ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ವ್ಯಂಗ್ಯವಾಡಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಕತ್ತೆ ನಿಲ್ಲಿಸಿದರೂ ಗೆಲ್ಲುತ್ತೆ ಎಂಬ ಮಾತು ಇದೆ ಎಂಬುದಾಗಿ ಹೇಳಿದ್ದಾರೆ. ಆದರೆ, ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಅವರು ಕತ್ತೆಯಾಗಿದ್ದರಾ? ಎಂದು ಪ್ರಶ್ನಿಸಿದ ಅವರು, 2013 ರಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಅವರು ಸಹ ಶಾಸಕರಾಗಿದ್ದರು.ಆಗ ಏಕೆ ಆರೋಪಗಳನ್ನು ಮಾಡಿ ಟೀಕಿಸಲಿಲ್ಲ. ಈಗ ಕರೊನಾ ಹಗರಣವನ್ನು ತನಿಖೆಗೆ ಒಪ್ಪಿಸಿದ ಹಿನ್ನೆಲೆಯಲ್ಲಿ ಹತಾಶಗೊಂಡು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಮೊದಲು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಮಾಜಿ ಸಚಿವರಿಗೆ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಅವರ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದು ಈಗ ಬೆಳೆಸಿದ ನಾಯಕರ ಬಗ್ಗೆ ಏನೇನು ಹೇಳುತ್ತಿದ್ದಾರೆ. ಅತಿ ವೇಗವಾಗಿ ಬೆಳವಣಿಗೆಯ ಕನಸು ಕಂಡಿದ್ದರು. ಇದಕ್ಕೆ ಯಾವುದೋ ಹಾದಿಯನ್ನು ಈ ಸ್ಥಿತಿಗೆ ಬಂದಿದ್ದಾರೆ. ಯಾರೇ ಆಗಲಿ ಅನರ್ಹರ ರೀತಿಯಲ್ಲಿ ಕೀಳು ಮಟ್ಟದ ರಾಜಕಾರಣವನ್ನು ಪ್ರದರ್ಶಿಸಬಾರದು ಎಂದರು.
ಕರೊನಾ ಸಂಕಷ್ಟದ ಸಂದರ್ಭದಲ್ಲಿ ಪಿಪಿಇ ಕಿಟ್, ಔಷಧ ಖರೀದಿ ಸೇರಿದಂತೆ ವಿವಿಧ ಕೆಲಸಗಳಲ್ಲಿ ಹಣವನ್ನು ಲೂಟಿ ಹೊಡೆಯಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ, ಬೇರೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ಹಣವನ್ನು ವಸೂಲಿ ಮಾಡಲಾಗಿದೆ. ಇದೆಲ್ಲವನ್ನೂ ಎದೆಮುಟ್ಟಿಕೊಂಡು ಅಲ್ಲಗೆಳೆಯಲಿ ನೋಡೋಣ ಎಂದು ಸವಾಲೆಸೆದರು.
ಕರೊನಾ ಸೋಂಕಿನಿಂದ ನೋವು ಅನುಭವಿಸುತ್ತಿದ್ದ ಜನರಿಗೆ ಸ್ಪಂದಿಸುವುದರ ಬದಲು ಭ್ರಷ್ಟಾಚಾರ ನಡೆಸಿ, ತೊಂದರೆ ನೀಡಲಾಯಿತು. ಇದೀಗ ಎಲ್ಲರ ಶಾಪ ಅವರಿಗೆ ತಟ್ಟಿದೆ ಎಂದರು.