ಜಿಲ್ಲೆ

ರಂಗಭೂಮಿಯ ಅಸ್ತಿತ್ವ ಉಳಿಸಿಕೊಂಡು ಹೋಗಬೇಕು*

ಚಿಕ್ಕಬಳ್ಳಾಪುರ: ಆಧುನಿಕತೆಯ ಅಬ್ಬರದಲ್ಲಿ ಸಿಲುಕಿ ನಲುಗುತ್ತಿರುವ ರಂಗಭೂಮಿಯ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಹೇಳಿದರು.
ಗೌರಿಬಿದನೂರು ನಗರದ  ಡಾ. ಎಚ್.ಎನ್.ಕಲಾ ಭವನದಲ್ಲಿ ದಸರಾ ಹಬ್ಬದ ಪ್ರಯುಕ್ತ ಸ್ಥಳೀಯ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಹೆಗ್ಗೋಡಿನ ನೀನಾಸಂ ನಾಟಕ ಮಂಡಳಿಯ ತಿರುಗಾಟದ ತಂಡ ಹಮ್ಮಿಕೊಂಡಿದ್ದ ಅಂಕದ ಪರದೆ  ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗಭೂಮಿ ಎಲ್ಲ ಕಲೆಗಳಿಗೂ ತಾಯಿ ಬೇರು ಇದ್ದಂತೆ. ಆದರೆ ಇಂದು ಮನರಂಜನಾ ಕ್ಷೇತ್ರ ವಿಸ್ತಾರಗೊಂಡಿದೆ. ಯುವ ಪೀಳಿಗೆ ಆಧುನಿಕ ನವ ಸಂಸ್ಕೃತಿಯ ವ್ಯಾಮೋಹಕ್ಕೆ ಬಿದ್ದಿದೆ. ಸಿನಿಮಾ, ಕಿರುತೆರೆ, ಸಾಮಾಜಿಕ ತಾಣಗಳೇ ಮನರಂಜನಾ ಕೇಂದ್ರಗಳಾಗಿವೆ. ಇದರಿಂದ ರಂಗಭೂಮಿ ಹಾಗೂ ಕಲಾವಿದರ ಸ್ಥಿತಿ ಚಿಂತಾಜನಕವಾಗುತ್ತಿದೆ ಎಂದು ವಿಷಾದಿಸಿದರು.
ರಂಗಭೂಮಿ ಕಲಾವಿದರು ತಮ್ಮ ಪಾತ್ರಗಳ ಮೂಲಕ ನಮ್ಮ ಜೀವನವನ್ನು ಪ್ರಸ್ತುತ ಪಡಿಸುವ ಜೊತೆಗೆ ನಮ್ಮ ಸಂಸ್ಕೃತಿ, ಭಾಷೆ, ಪರಂಪರೆ, ಆಚರಣೆ, ಸಾಹಿತ್ಯಗಳನ್ನು ಪ್ರತಿಬಿಂಬಿಸುತ್ತಾರೆ. ಆದ್ದರಿಂದ ರಂಗಭೂಮಿಯನ್ನು ಉಳಿಸಿಕೊಂಡು ಹೋಗಬೇಕು. ರಂಗಭೂಮಿ ಚಟುವಟಿಕೆ ನಿರಂತರಾಗಿ ನಡೆಯಬೇಕು. ಇದರಿಂದ ಕಲೆಗೆ ಉತ್ತೇಜನ ನೀಡುವ ಜೊತೆಗೆ ಕಲಾವಿದರ ಬೆಳೆವಣಿಗೆಗೆ ಕಾರಣವಾಗುತ್ತದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ ಶ್ಯಾಮಸುಂದರ್ ಮಾತನಾಡಿ ನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ನಾಟಕಗಳು ತನ್ನದೇ ಆದ ಮೈಲಿಗಲ್ಲನ್ನು ಹೊಂದಿವೆ. ನಾಟಕಗಳು ಜನ ಪರಂಪರೆಯ ಜೀವನದ ಮೌಲ್ಯಗಳ ಸಂದೇಶಗಳಾಗಿವೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಡಿ.ಜೆ.ಚಂದ್ರ ಮೋಹನ್ ಮಾತನಾಡಿ, ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನೀನಾಸಂ ತಂಡ ಮಾದರಿ ಕೆಲಸ ಮಾಡುತ್ತಿದೆ. ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಯುವ ಪೀಳಿಗೆಯನ್ನು ರಂಗಭೂಮಿಯತ್ತ ಆಕರ್ಷಿಸುತ್ತಿದೆ ಎಂದ ಅವರು,
ಭವ ಭೂತಿ ಕವಿಯ ಸಂಸ್ಕೃತ ನಾಟಕ ಮಾಲತಿ ಮಾಧವ ಹಾಗೂ ಮರಾಠಿ ಮೂಲಕ ಅಂಕದ ಪರದೆ ನಾಟಕಗಳನ್ನು ಮೂಲಕ್ಕೆ ಧಕ್ಕೆ ಬಾರದಂತೆ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ಅನುವಾದಿಸಿ ಜನರ ಮುಂದೆ ಉತ್ತಮವಾಗಿ ಪ್ರದರ್ಶಿಸಲಾಗುತ್ತಿಲ್ಲ ಎಂದರು.‌
ಕಾರ್ಯಕ್ರಮದಲ್ಲಿ ಸಾಹಿತಿ ಯೋಗೇಶ್ ಮಾಸ್ಟರ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ. ಕೆ ವಿ ನಾಯಕ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ನಾಗರಾಜಪ್ಪ, ಡಾ. ಪ್ರಕಾಶ್ ಮತ್ತಿತರರು ಹಾಜರಿದ್ದರು.