ಜಿಲ್ಲೆ

ವಾಹನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ

ಸುನಿಲ್ ಪೊನ್ನೇಟಿ ಮಡಿಕೇರಿ:

ಕೊಡಗು ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಭವನ ಉದ್ಘಾಟನೆ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ವಾಹನ ಮತ್ತು ಕೃಷಿ ಯಂತ್ರೋಪಕರಣಗಳ ಮೇಳ ಆಸಕ್ತರ ಗಮನ ಸೆಳೆಯಿತು. ದೇಶದ ಪ್ರಖ್ಯಾತ ವಾಹನ ತಯಾರಕರ ವಾಹನಗಳು, ಕೃಷಿ ಯಂತ್ರೋಪಕರಣ ತಯಾರಿಕಾ ಸಂಸ್ಥೆಗಳ ಕೃಷಿ ಯಂತ್ರಗಳನ್ನು ಒಂದೇ ಸೂರಿನಡಿಯಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದರಿಂದ ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ಈ ಮೇಳಕ್ಕೆ ಆಗಮಿಸಿ ವೀಕ್ಷಣೆ ಮಾಡುತ್ತಿದ್ದ ದೃಶ್ಯ ಕಂಡುಬಂತು. ಇವುಗಳ ಖರೀದಿಗಾಗಿ ಬ್ಯಾಂಕ್ ವತಿಯಿಂದ ಸ್ಥಳದಲ್ಲೇ ಸಾಲದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಇತರ ಭಾಗಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಕೊಡಗಿನಲ್ಲಿ ವಾಹನಗಳ ಕ್ರೇಜ್ ಸ್ವಲ್ಪ ಹೆಚ್ಚು ಎನ್ನುವುದು ಜನಜನಿತ ಮಾತು. ಯಾವುದೇ ಸಂಸ್ಥೆ ಹೊಸ ಮಾಡೆಲ್ ವಾಹನ ಬಿಡುಗಡೆ ಮಾಡಿದರೂ ಅಂಥ ಕನಿಷ್ಠ ಒಂದು ವಾಹನ ಬಿಡುಗಡೆಯಾದ ತಿಂಗಳ ಒಳಗೆ ಕೊಡಗಿನಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕೊಡಗಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ದೊಡ್ಡ ಮಟ್ಟದ ವಾಹನ ಮೇಳ ಸಾಕಷ್ಟು ಸಂಖ್ಯೆಯಲ್ಲಿ ವಾಹನ ಪ್ರೇಮಿಗಳನ್ನು ಸೆಳೆಯುತ್ತಿದೆ. ಒಂದಕ್ಕಿಂತ ಒಂದು ಚೆಂದದ ಕಾರು, ಬೈಕ್, ಸ್ಕೂಟರ್‌ಗಳು ಗಾಂಧಿ ಮೈದಾನದಲ್ಲಿ ಜನಾಕರ್ಷಣೆಯ ಕೇಂದ್ರವಾಗಿವೆ. ಜನಸಾಮಾನ್ಯರ ಆಸಕ್ತಿಗೆ ಪೂರಕವಾಗಿ ದ್ವಿಚಕ್ರ ವಾಹನ ಮಾರಾಟದ ೪ ಸಂಸ್ಥೆಗಳು, ತ್ರಿಚಕ್ರ ವಾಹನ ಮಾರಾಟದ ೨ ಸಂಸ್ಥೆಗಳು, ನಾಲ್ಕು ಚಕ್ರ ವಾಹನ ಮಾರಾಟದ ಬರೋಬ್ಬರಿ ೧೪ ಸಂಸ್ಥೆಗಳು ಹಾಗೂ ವಾಣಿಜ್ಯ ವಾಹನ ಮಾರಾಟದ ೩ ಸಂಸ್ಥೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಅದರಲ್ಲೂ ಸುಜುಕಿ ಮತ್ತು ಹುಂಡೈ ಸಂಸ್ಥೆಗಳು ಇದೇ ಸಂದರ್ಭ ಬಳಸಿಕೊಂಡು ತಮ್ಮ ಕಂಪೆನಿಯ ನೂತನ ಮಾಡೆಲ್‌ಗಳನ್ನೂ ಇಲ್ಲಿ ಅನಾವರಣಗೊಳಿಸಿವೆ. ಕೊಡಗಿನಲ್ಲಿ ಶೋ ರೂಂ ಇಲ್ಲದ ಸಂಸ್ಥೆಗಳೂ ಗ್ರಾಹಕರನ್ನು ಹುಡುಕಿಕೊಂಡು ಬಂದು ಇಲ್ಲಿ ತಮ್ಮ ವಾಹನಗಳನ್ನು ಪ್ರದರ್ಶನಕ್ಕೆ ಇಟ್ಟಿವೆ.

ಎಂಜಿ ಸಂಸ್ಥೆಯ ಪುಟಾಣಿ ಎಲೆಕ್ಟ್ರಿಕ್ ಕಾರು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿದೆ. ಇದರ ಜತೆಗೆ ಕಿಯಾ ಸಂಸ್ಥೆಯ ಐಷರಾಮಿ ಎಲೆಕ್ಟ್ರಿಕ್ ವಾಹನಗಳನ್ನೂ ಕಾರು ಪ್ರಿಯರು ಆಸಕ್ತಿಯಿಂದ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು. ತ್ರಿ ಚಕ್ರ ವಾಹನ ಮಾರಾಟ ಸಂಸ್ಥೆಗಳು ತಮ್ಮ ಎಲೆಕ್ಟ್ರಿಕ್ ವಾಹನಗಳ ಪ್ರಚಾರಕ್ಕೆ ಈ ಮೇಳದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಿದಂತಿತ್ತು. ಐಷಾರಾಮಿ ಹೈಬ್ರಿಟ್ ಕಾರುಗಳನ್ನೂ ಜನರು ಆಸಕ್ತಿಯಿಂದ ವೀಕ್ಷಿಸುವ, ಅವುಗಳ ಬೆಲೆ ವಿಚಾರಿಸುವ ಹಾಗೂ ಅದರಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ ದೃಶ್ಯ ಕಂಡುಬಂತು.

ಈಗಷ್ಟೇ ಮುಗಿದಿರುವ ಸಂಕ್ರಾಂತಿ ಹಬ್ಬದ ಆಫರ್‌ಗಳನ್ನು ಬಹುತೇಕ ವಾಹನ ಮಾರಾಟ ಸಂಸ್ಥೆಗಳು ಈ ಮೇಳದಲ್ಲೂ ಮುಂದುವರಿಸಿದ್ದರು. ಇಲ್ಲಿಗೆ ಆಗಮಿಸಿ ಕಾರುಗಳನ್ನು ಬುಕ್ ಮಾಡಿದವರಿಗೂ ಮಾರಾಟ ಸಂಸ್ಥೆಗಳು ವಿಶೇಷ ಆಫರ್‌ಗಳ ವ್ಯವಸ್ಥೆ ಮಾಡಿವೆ. ಅಲ್ಲದೆ ಕೆಡಿಸಿಸಿ ಬ್ಯಾಂಕ್ ತನ್ನ ಸದಸ್ಯರಿಗೆ ಸಾಲದ ಸೌಲಭ್ಯವನ್ನೂ ನೀಡಿದೆ. ಜತೆಗೆ ಈ ಮೇಳದಲ್ಲಿ ವಾಹನ ಖರೀದಿಸಿದರೆ ಕೆಡಿಸಿಸಿ ಬ್ಯಾಂಕ್ ವತಿಯಿಂದ ಶೇ.೫ರಷ್ಟು ಪ್ರಮಾಣದಲ್ಲಿ ದರ ಕಡಿತದ ವ್ಯವಸ್ಥೆಯನ್ನೂ ಮಾಡಲಾಗಿದೆ. ಹಾಗಾಗಿ ದೊಡ್ಡ ಪ್ರಮಣದಲ್ಲಿ ವಾಹನಗಳ ಬುಕ್ಕಿಂಗ್ ನಿರೀಕ್ಷೆಯನ್ನು ಬ್ಯಾಂಕ್ ಮತ್ತು ವಾಹನಗಳ ಮಾರಾಟ ಸಂಸ್ಥೆಗಳು ಇಟ್ಟುಕೊಂಡಿವೆ.

ಕಾರ್ಮಿಕರ ಕೊರತೆ ಮತ್ತು ಏರುತ್ತಿರುವ ಉತ್ಪಾದನಾ ವೆಚ್ಚದ ಸಮಸ್ಯೆಗೆ ಕೃಷಿಯಲ್ಲಿ ಯಾಂತ್ರೀಕರಣವೇ ಪರಿಹಾರ ಎನ್ನುವುದು ಎಲ್ಲರ ನಂಬಿಕೆ. ಹಾಗಾಗಿ ಈ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕೃಷಿ ಯಂತ್ರೋಪಕರಣ ಖರೀದಿ ಮಾಡುವವರಿಗೆ ಶೇ. ೭ ರಷ್ಟು ಪ್ರಮಾಣದಲ್ಲಿ ದರ ಕಡಿತ ಮಾಡಲಾಗುತ್ತದೆ. ಇದರ ಜತೆಗೆ ಮಾರಾಟ ಸಂಸ್ಥೆಗಳ ವಿಶೇಷ ರೀಯಾಯಿತಿಗಳೂ ಇವೆ. ಕೃಷಿ ಯಂತ್ರೋಪಕರಣ ತಯಾರಿಕೆ ಮತ್ತು ಮಾರಾಟದ ೭ ಸಂಸ್ಥೆಗಳು ಇಲ್ಲಿ ಪಾಲ್ಗೊಂಡಿವೆ.

ವಾಹನಗಳ ಪ್ರದರ್ಶನದಂತೆ ಕೃಷಿ ಯಂತ್ರೋಪಕರಣಗಳ ಪ್ರದರ್ಶನವೂ ಕೃಷಿಕರನ್ನು ಆಕರ್ಷಿಸುತ್ತಿದೆ. ಕಾಫಿ ಮತ್ತು ಅಡಿಕೆ ತೋಟಗಳಲ್ಲಿ ಬಳಕೆ ಆಗುವ ಯಂತ್ರಗಳ ಬಗ್ಗೆ ರೈತರು ಹೆಚ್ಚಿನ ಆಸಕ್ತಿಯಿಂದ ಮಾಹಿತಿ ಪಡೆಯುತ್ತಿದ್ದ ದೃಶ್ಯ ಕಂಡುಬಂತು. ಬೃಹತ್ ಟ್ರ್ಯಾಕ್ಟರ್‌ಗಳಿಂದ ಪುಟ್ಟ ಪವರ್ ವೀಡರ್ ತನಕವೂ ಬಗೆ ಬಗೆಗೆಯ ಯಂತ್ರಗಳು ಇಲ್ಲಿದ್ದವು. ಕಳೆ ಕೊಚ್ಚುವ ಯಂತ್ರ, ಬ್ಲೋವರ್, ಯಾಂತ್ರಿಕೃತ ಗರಗಸ, ರೀಚಾರ್ಜೇಬಲ್ ಟಾರ್ಚ್‌ಗಳು ಸೇರಿದಂತೆ ಕೃಷಿಕರಿಗೆ ಆಧುನಿಕ ಕೃಷಿ ಪದ್ಧತಿಗೆ ಅನುಕೂಲ ಆಗುವ ಸಾಕಷ್ಟು ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಇಲ್ಲಿ ನಡೆಯುತ್ತಿದೆ. ಶನಿವಾರವೂ ಇದು ಮುಂದುವರಿಯಲಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಮೇಳವನ್ನು ನಮ್ಮ ಸಂಸ್ಥೆ ವತಿಯಿಂದ ಆಯೋಜಿಸಲಾಗಿದೆ. ಪ್ರಖ್ಯಾತ ಸಂಸ್ಥೆಗಳು ಇಲ್ಲಿ ಪಾಲ್ಗೊಂಡಿವೆ. ಖರೀದಿದಾರರಿಗೆ ಸಾಕಷ್ಟು ಅವಕಾಶಗಳೂ ಇವೆ. ಬ್ಯಾಂಕ್ ವತಿಯಿಂದ ಸುಲಭ ಸಾಲ ಮಾತ್ರವಲ್ಲದೆ ವಾಹನಗಳ ಮೇಲೆ ಶೇ.೫ ಹಾಗೂ ಕೃಷಿ ಯಂತ್ರೋಪಕರಣಗಳ ಮೇಲೆ ಶೇ. ೭ರಷ್ಟು ರಿಯಾಯಿತಿ ಇದೆ. ಇದರ ಜತೆಗೆ ವಾಹನ ಮತ್ತು ಯಂತ್ರೋಪಕರಣ ತಯಾರಿಕಾ ಸಂಸ್ಥೆಗಳೂ ವಿಶೇಷ ರಿಯಾಯಿತಿ ಸೌಲಭ್ಯ ಕಲ್ಪಿಸಿವೆ. ಸಾರ್ವಜನಿಕರು ಈ ಸೌಲಭ್ಯ ಬಳಸಿಕೊಳ್ಳಬಹುದು.
ಕೊಡಂದೇರ ಪಿ. ಗಣಪತಿ, ಅಧ್ಯಕ್ಷ, ಕೆಡಿಸಿಸಿ ಬ್ಯಾಂಕ್, ಮಡಿಕೇರಿ

ಕೆಡಿಸಿಸಿ ಬ್ಯಾಂಕ್ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮ ಸಾಕಷ್ಟು ಉಪಯುಕ್ತವಾಗಿದೆ. ವಾಹನಗಳ ಬಗ್ಗೆ ಆಸಕ್ತಿ ಇರುವವರಿಗೆ ಎಲ್ಲಾ ಬಗೆಯ ವಾಹನಗಳ ಮಾಹಿತಿ ಇಲ್ಲಿ ಸಿಗುತ್ತಿದೆ. ಸಾಕಷ್ಟು ಹೊಸ ಮಾಡೆಲ್‌ಗಳ ವಾಹನಗಳನ್ನು ನೋಡುವ ಅವಕಾಶವೂ ಇಲ್ಲಿದೆ. ಯಾಂತ್ರಿಕ ಕೃಷಿಯ ಇಂದಿನ ದಿನಗಳಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಕೃಷಿಯನ್ನು ಲಾಭದಾಯಕವಾಗಿಸುವ  ಎಲ್ಲಾ ಸಾಧ್ಯತೆಗಳಿದ್ದು ಈ ನಿಟ್ಟಿನಲ್ಲಿ ಇಲ್ಲಿ ಪ್ರದರ್ಶನ ಆಗುತ್ತಿರುವ ಯಂತ್ರಗಳು ಪೂರಕವಾಗಿವೆ.
ಮಧು ಪೊನ್ನಚನ, ಮಡಿಕೇರಿ ನಿವಾಸಿ