ಜಿಲ್ಲೆ

ಹೊಳಲು ಗ್ರಾಮದ ಕೆರೆಯ ತೂಬಿನ ಗೇಟ್‌ನಲ್ಲಿ ರಂಧ್ರ: ಪರಿಶೀಲನೆ ನಡೆಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು

ಮಂಡ್ಯ: ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ ಅವರು ತಾಲೂಕಿನ ಹೊಳಲು ಗ್ರಾಮದ ದೊಡ್ಡಕೆರೆ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸೂಚನೆ ಮೇರೆಗೆ ಕೆರೆಯ ತೂಬಿನ ಗೇಟ್‌ನಲ್ಲಿ ರಂಧ್ರ ಕಾಣಿಸಿಕೊಂಡಿದ್ದು, ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.

ಕೆರೆ ತೂಬಿನ ಗೇಟ್‌ನಲ್ಲಿ ರಂಧ್ರ ಕಾಣಿಸಿಕೊಂಡಿದ್ದು, ಇದರಿಂದಾಗಿ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ನೀರೆಲ್ಲವೂ ಪೋಲಾಗುತ್ತಿದ್ದು, ಶೀಘ್ರ ಈ ಬಗ್ಗೆ ಕ್ರಮ ವಹಿಸಿ ದುರಸ್ಥಿಪಡಿಸುವುದಾಗಿ ಭರವಸೆ ನೀಡಿದರು.

ಕೆರೆಯಲ್ಲಿ ಸಂಗ್ರಹವಾಗಿರುವ ಹೂಳು ತೆಗೆಸಿದಲ್ಲಿ 100 ಎಕರೆ ಪ್ರದೇಶಕ್ಕೆ ಒಂದು ವರ್ಷದ ಅವಧಿಗೆ ನೀರು ಒದಗಿಸಬಹುದಾಗಿದೆ. ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಲಾಗುವುದು. ಕೆರೆ ಕಾಲುವೆಗಳ ದುರಸ್ಥಿಗೂ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದು, ಹಂತ ಹಂತವಾಗಿ ಈ ಬಗ್ಗೆ ದುರಸ್ಥಿಗೆ ಕ್ರಮ ವಹಿಸಲಾಗುವುದು. ರೈತರು ಸಹ ನಮ್ಮೊಂದಿಗೆ ಸಹಕಾರ ನೀಡಬೇಕು ಎಂದು ಕೋರಿದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ್, ಸಹಾಯಕ ಇಂಜಿನಿಯರ್ ನಿಂಗರಾಜು, ಮಾಜಿ ಗ್ರಾ.ಪಂ. ಅಧ್ಯಕ್ಷ ಎಚ್.ಡಿ. ರವಿ, ಸದಸ್ಯ ನಾರಾಯಣ, ರೈತ ಮುಖಂಡರಾದ ಚೇತನ್, ಎಚ್.ಡಿ. ಹರಿಪ್ರಸಾದ್, ಪ್ರಕಾಶ್, ಎಚ್.ವೈ. ಶಿವಕುಮಾರ್, ಅಂಬ್ಲಿ ಶಿವಲಿಂಗಯ್ಯ, ರಮೇಶ, ಸೋಮು ಗಂಗರಾಜು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.