ಶೃಂಗೇರಿ: ರೈತರು ಹಾಗೂ ಜನಸಾಮಾನ್ಯರು ಜೀವನಾವಶ್ಯಕತೆಗಾಗಿ ಮಾಡಿರುವ ಕೃಷಿ ಭೂಮಿ ಹಾಗೂ ವಾಸದ ಜಾಗವನ್ನು ಮೀಸಲು ಅರಣ್ಯವ್ಯಾಪ್ತಿಯಿಂದ ಕೈಬಿಡುವಂತೆ ಆಗ್ರಹಿಸಿ ತಾಲೂಕು ರೈತ ಸಂಘದ ಸದಸ್ಯರು ತಹಸೀಲ್ದಾರ್ ಅನುಪ್ ಸಂಜೋಗ್‌ಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಪ್ರದೇಶವನ್ನು ಪ್ರಾಸ್ತಾವಿಕ 41ಅರಣ್ಯ ನಕಾಶೆ ತಯಾರಿಸಿದ್ದು, ಈ ಪ್ರದೇಶಗಳನ್ನು ಮೀಸಲು ಅರಣ್ಯ ಎಂದು ಪೋಷಣೆ ಮಾಡುವಾಗ ರೈತರು,ಕೃಷಿ ಕಾರ್ಮಿಕರು ಮತ್ತು ಜನಸಾಮಾನ್ಯರು ತಮ್ಮ ಜೀವನದ ಅವಶ್ಯಕತೆಗಾಗಿ ಸರ್ಕಾರಿ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಬಡವರು ತಮ್ಮ ವಾಸಕ್ಕಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಮೀಸಲು ಅರಣ್ಯ17 ಘೋಷಣೆ ಮಾಡುವಾಗ ಸಾಮಾನ್ಯರ ಭಾವನೆಗಳನ್ನು ಅರ್ಥಮಾಡಿಕೊಂಡು ಮಾನವೀಯತೆಯಿಂದ ವರ್ತಿಸಬೇಕು. ಈ ಕುರಿತು ಜನವರಿ 21ರಂದು ರೈತಸಂಘ ತಾಲೂಕು ಕಚೇರಿಯಲ್ಲಿ ಸತ್ಯಾಗ್ರಹ ಮಾಡಿದಾಗ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಮಗೆ ಭರವಸೆ ನೀಡಿದ್ದಾರೆ. ಆದರೆ ಇಲ್ಲಿ ತನಕ ಯಾವುದೇ ಕ್ರಮ ಜರುಗಿಸದ ಕಾರಣ ಅಧಿಕಾರಿಗಳಿಗೆ ಮೇ 30ರ ಒಳಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಗಡವು ನೀಡಲಾಗಿದೆ. ಇಲ್ಲವಾದಲ್ಲಿ ಜೂನ್ 2 ರಿಂದ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು
ನರೇಂದ್ರ, ಕೆಲವಳ್ಳಿ ಗುಂಡಪ್ಪ, ಚಂದ್ರಶೇಖರ್ ಇದ್ದರು.