ಜಿಲ್ಲೆ

ಶಿಗ್ಗಾಂವಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಬಕಾರಿ ದಾಳಿ 49 ಲೀಟರ್ ಮದ್ಯ ವಶ

ಹಾವೇರಿ: ಶಿಗ್ಗಾಂವಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ಭಾನುವಾರ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು 49 ಲೀಟರ್ ಮದ್ಯ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯ ಯಲ್ಲಪ್ಪ ತಳ್ಳಳ್ಳಿ (40) ಬಂಧಿತ ಆರೋಪಿ.

ಶಿಗ್ಗಾಂವಿ ತಾಲೂಕಿನ ಹುನಗುಂದ, ಹನುಮರಹಳ್ಳಿ, ಲಕ್ಕಿಕೊಪ್ಪ ತಡಸ, ಅತ್ತಿಗೇರಿ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಅಬಕಾರಿ ಆಯುಕ್ತೆ ಟಿ.ವಿ. ಶೈಲಜಾ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು 49 ಲೀಟರ್ ಮದ್ಯ, ಬೈಕ್ ಸೇರಿ ಒಟ್ಟು 1.18 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ನಿರೀಕ್ಷಕ ಪ್ರಕಾಶ ಮಾಕೊಂಡ, ಅಬಕಾರಿ ಉಪ ನಿರೀಕ್ಷಕ ಮಲ್ಲಪ್ಪ ಖಂಡೇಕಾರ, ಮುಖ್ಯ ಪೇದೆ ಪಿ.ಆರ್. ದೊಡಮನಿ, ಸಿಬ್ಬಂದಿ ಯಲ್ಲಪ್ಪ ರೆಡ್ಡಿರಡ್ಡರ, ಮಂಜುನಾಥ ಕುಬಸದ, ಮಹ್ಮದ್ ಜಾಫರ್ ಜೆಂಡೆದ, ಫಕೀರೇಶ ಯಳ್ಳೂರು, ಮಂಜುನಾಥ ನಂದಿಯವರ ಕಾರ್ಯಾಚರಣೆಯಲ್ಲಿದ್ದರು.