ಜಿಲ್ಲೆ

ಜಿಲ್ಲಾಡಳಿತಕ್ಕೆ ಕಳ್ಳಬಟ್ಟಿ ತಲೆನೋವು !

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಕರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಇದ್ದುದ್ದರಿಂದ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಳ್ಳಬಟ್ಟಿ ತಯಾರಿಕೆ ಹಾಗೂ ಮಾರಾಟ ಎಗ್ಗಿಲ್ಲದೆ ಸಾಗಿರುವುದು ಜಿಲ್ಲಾಡಳಿತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಮಾ.22ರಿಂದ ಜಿಲ್ಲಾದ್ಯಂತ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಜಿಲ್ಲಾಡಳಿತದಿಂದ ಗ್ರಾಮೀಣ, ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಜನಸಂದಣಿ ಆಗದಂತೆ ಹದ್ದಿನ ಕಣ್ಣಿರಿಸಲಾಗಿದೆ. ಆದರೂ ಆಡಳಿತದ ಕಣ್ತಪ್ಪಿಸಿ ಕಳ್ಳಬಟ್ಟಿ ತಯಾರಿಕೆ ಬಿಂದಾಸ್ ನಡೆಯುತ್ತಿರುವುದು ಹಳ್ಳಿಗಾಡಿನ ಮಹಿಳೆಯರನ್ನು ಆತಂಕಕ್ಕೆ ದೂಡಿದೆ.

ಹೊಟ್ಟೆಪಾಡಿಗಾಗಿ ಗ್ರಾಮೀಣ ಭಾಗದಿಂದ ದೊಡ್ಡ ದೊಡ್ಡ ಶಹರಗಳಿಗೆ ಗುಳೆ ಹೋಗಿದ್ದವರು ಕರೊನಾ ಹೆಮ್ಮಾರಿಗೆ ಹೆದರಿ ಮರಳಿ ಗೂಡು ಸೇರಿದ್ದಾರೆ. ಸಕರ್ಾರ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದರಿಂದ ಪಾನಪ್ರಿಯರು ಪರೇಶಾನ್ನಲ್ಲಿದ್ದು, ಸಂಜೆಯಾದರೆ ಸಾಕು ಎಣ್ಣೆ ಹುಡುಕಿಕೊಂಡು ಹೋಗುತ್ತಿದ್ದಾರೆ. ಆದರೆ ಎಲ್ಲ ಕಡೆ ಪೊಲೀಸರು ಟೈಟ್ ಮಾಡಿದ್ದರಿಂದ ಮದ್ಯ ಸಿಗದಂತಾಗಿದೆ.

ಗುರುಮಠಕಲ್ ಗಡಿ ಭಾಗದಲ್ಲಿ ಕಳ್ಳಬಟ್ಟಿ ತಯಾರಿಕೆ ದಿನೇದಿನೆ ಹೆಚ್ಚಾಗುತ್ತಿದ್ದು, ತಾಂಡಾಗಳಲ್ಲಿ ಇದರ ಹಾವಳಿ ಮಿತಿ ಮೀರುತ್ತಿದೆ. ಇಳಿಹೊತ್ತಿನಲ್ಲಿ ಮದಿರೆಯನ್ನು ತಲೆಗೇರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ.

ಜಿಲ್ಲೆಯ ಕೆಲ ತಾಂಡಾಗಳಲ್ಲಿ ಹಾಡಹಗಲೆ ಕಳ್ಳಬಟ್ಟಿ ಮಾರಾಟ ಮಾಡಲಾಗುತ್ತಿದೆ. ಯಾದಗಿರಿ ತೆಲಂಗಾಣ ಗಡಿಗೆ ಅಂಟಿಕೊಂಡಿದ್ದರಿಂದ ಅಕ್ರಮ ಸಾರಾಯಿ ಮಾರಾಟ ಮೊದಲಿನಿಂದಲೂ ನಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಲಾಕ್ಡೌನ್ ಸಂದರ್ಭದಲ್ಲೂ ಈ ದಂಧೆ ಮುಗ್ಧರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಕಳ್ಳಬಟ್ಟಿ ಸೇವನೆಯಿಂದ ಆರೋಗ್ಯ ಕೆಡುವುದು ಗೊತ್ತಿದ್ದರೂ ಕಮ್ಮಿ ಬೆಲೆಗೆ ಸಿಗುವ ಕಾರಣ ಗ್ರಾಮೀಣ ಭಾಗದಲ್ಲಿ ಲೀಟರ್ಗಟ್ಟಲೆ ಸ್ಟಾಕ್ ಮಾಡಿಕೊಂಡು ಸೇವಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ದಂಧೆ ನಡೆಸುವವರ ವಿರುದ್ಧ ಧ್ವನಿ ಎತ್ತಿದರೆ ಧಮ್ಕಿ ಹಾಕಲಾಗುತ್ತಿದೆಯಂತೆ.

ಈಗಾಗಲೇ ಕರೊನಾ ವೈರಸ್ನಿಂದ ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದೆ ಹೈರಾಣಾಗಿ ಹಳ್ಳಿಗೆ ಬಂದ ಗುಳೆ ಮಂದಿಗೆ ಕಳ್ಳಬಟ್ಟಿ ಮತ್ತೊಂದು ಸಮಸ್ಯೆಯಾಗಿ ಕಾಡುತ್ತಿದೆ. ಸಾರಾಯಿ ಕುಡಿದು ಮನೆಯಲ್ಲಿ ನಿತ್ಯ ಜಗಳ, ಮನಸ್ತಾಪ ಹೆಚ್ಚಿದ್ದು, ಮಹಿಳೆಯರು ದಂಧೆಕೋರರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಅಕ್ರಮದತ್ತ ನಜರ್ ಹರಿಸಿ ಕಡಿವಾಣ ಹಾಕಬೇಕು ಎಂಬುದು ಪ್ರಜ್ಞಾವಂತ ಸಮಾಜದ ಒತ್ತಾಸೆ.