ಜಿಲ್ಲೆ

ಅಬಕಾರಿ ಪೇದೆ, ಹೋಮ್‌ಗಾರ್ಡ್ ಮೇಲೆ ಹಲ್ಲೆ

ನವೀನ ಬಿ.ಎಂ

ಶಿವಮೊಗ್ಗ: ಹೊಳಹೊನ್ನೂರು ರಸ್ತೆಯ ಲಾಡ್ಜ್‌ವೊಂದರ ಬಳಿ ಗಾಂಜಾ ಸೇವಿಸುತ್ತಿದ್ದ ಆರೋಪದ ಮೇರೆಗೆ ಪರಿಶೀಲನೆಗೆ ತೆರಳಿದ್ದ ಅಬಕಾರಿ ಪೇದೆ ಮತ್ತು ಹೋಮ್‌ಗಾರ್ಡ್ ಮೇಲೆ ಮೂವರು ಮನಸ್ಸೋಇಚ್ಚೆ ಹಲ್ಲೆ ನಡೆಸಿದ್ದು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ.

ಅಬಕಾರಿ ಪೇದೆ ಪ್ರಭು ಮತ್ತು ಹೋಮ್‌ಗಾರ್ಡ್ ಯುಸೂಫ್ ಖಾನ್ ಹಲ್ಲೆಗೆ ಒಳಗಾದವರು. ಪ್ರಕಾಶ, ಕಿಶೋರ ಸೇರಿ ಮೂವರು ಹಲ್ಲೆ ಮಾಡಿದ್ದರು. ಹೊಳೆಹೊನ್ನೂರು ರಸ್ತೆಯ ಲಾಡ್ಜ್ ಸಮೀಪ ಗಾಂಜಾ ಸೇವಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಅಬಕಾರಿ ಡಿವೈಎಸ್‌ಪಿ ಸೂಚನೆ ಮೇರೆಗೆ ಪ್ರಭು ಮತ್ತು ಯುಸೂಫ್ ಖಾನ್ ಸ್ಥಳಕ್ಕೆ ತೆರಳಿದ್ದರು. ಎರಡು ಬೈಕ್‌ಗಳ ಮೇಲೆ ಮೂವರು ಕುಳಿತಿರುವುದನ್ನು ಗಮನಿಸಿದ್ದರು.

ಈ ವೇಳೆ ಪೇದೆ ಪ್ರಭು ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಮುಂದಾದಾಗ ಪ್ರಭು ಮತ್ತು ಯುಸೂಫ್ ಖಾನ್ ತಪ್ಪಿಸಿಕೊಂಡು ಸಮೀಪದ ಬಾರ್‌ನಲ್ಲಿ ರಕ್ಷಣೆ ಪಡೆದಿದ್ದರು. ಅಲ್ಲಿಗೂ ಬಂದ ಯುವಕರು ಮತ್ತೆ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಅಷ್ಟೊತ್ತಿಗೆ ಅಬಕಾರಿ ಇಲಾಖೆಯ ಇತರೆ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಪ್ರಕಾಶ ಮತ್ತು ಕಿಶೋರ ಅವರನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ಪ್ರಭು ಮತ್ತು ಯುಸೂಫ್ ಖಾನ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.