ಜಿಲ್ಲೆ

ಕಾಂಗ್ರೆಸ್ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರಿಂದ ಮೋದಿ ಪರ ಜೈಕಾರ

Dakshina Kannada

ಬಂಟ್ವಾಳ: ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಪುಂಜಾಲಕಟ್ಟೆ ಬಳಿಯ ದೈಕಿನಕಟ್ಟೆ ಪೆಟ್ರೋಲ್ ಪಂಪ್ ಮುಂಭಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗುತ್ತಿದ್ದ ವೇಳೆ ಪೆಟ್ರೋಲ್ ಹಾಕಿಸಲು ಪಂಪ್‌ಗೆ ಬಂದ ಜಿಪಂ ಸದಸ್ಯ ತುಂಗಪ್ಪ ಬಂಗೇರ ಹಾಗೂ ಮತ್ತಿತರ ಬಿಜೆಪಿ ಕಾರ್ಯಕರ್ತರು ಮೋದಿಗೆ ಜೈಕಾರ ಹಾಕಿದ್ದಾರೆ. ಧರ್ಮದಾನಿ ಪ್ರಧಾನಿ, ಉಚಿತ ವ್ಯಾಕ್ಸಿನ್, ಆಯುಷ್ಮಾನ್ ಭಾರತ್, ಉಚಿತ ಪಡಿತರ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಗಳನ್ನು ಧರ್ಮಾರ್ಥವಾಗಿ ನೀಡಿದ್ದಾರೆ ಎಂದು ಹೇಳಿ ಪ್ರಧಾನಿ ಪರ ಘೋಷಣೆ ಕೂಗಿದರು.

ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಬೆಂಗಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಘರ್ಷಣೆಯ ಹಂತ ತಲುಪುತ್ತಿದ್ದಂತೆಯೇ ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.