ಮಾನ್ವಿ: ಆರೋಗ್ಯದ ದೃಷ್ಟಿಯಿಂದ ದೇಹದ ಒಂದೊಂದು ಭಾಗಗಳನ್ನು ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಹಾಗೂ ಜನಹಿತ ಐ. ಕೇರ್ ಸೆಂಟರ್ ಬೆಂಗಳೂರಿನ ಡಾ.ಕೃಷ್ಣ ಮೋಹನ್ ಜಿಂಕಾ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಶ್ರೀ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ ಅಂಗವಾಗಿ ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಹಾಗೂ ಜನಹಿತ ಐ. ಕೇರ್ ಸೆಂಟರ್ ಬೆಂಗಳೂರಿನ ಡಾ.ಕೃಷ್ಣ ಮೋಹನ್ ಜಿಂಕಾ ನೇತೃತ್ವದ ತಜ್ಞ ವೈದ್ಯರ ತಂಡದಿಂದ ಆಯೋಜಿಸಿದ್ದ ಬೃಹತ್ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ಕಣ್ಣುಗಳು ಅತಿಮುಖ್ಯ. ಅವುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಆಗತ್ಯವಿದೆ. ಅತಿಯಾಗಿ ಮೊಬೈಲ್, ಟಿವಿ ಬಳಕೆಯಿಂದ ಕಣ್ಣುಗಳಿಗೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ಮೊಬೈಲ್‌ನಿಂದ ಚಿಕ್ಕ ಮಕ್ಕಳಿಗೆ ಕಣ್ಣಿನ ದೃಷ್ಟಿ ತೊಂದರೆ ಹೆಚ್ಚಾಗುತ್ತಿವೆ ಎಂದರು.
ನೇತ್ರ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ 180 ಕ್ಕೂ ಹೆಚ್ಚು ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಸಹಕಾರಿಯ ಸಿಇಒ ವೆಂಕಟೇಶ ಇಲ್ಲೂರು ಕಣಿನ ಶಸ್ತ್ರ ಚಿಕಿತ್ಸೆ ಪಡೆದವರಿಗೆ ಅಗತ್ಯ ಕಿಟ್‌ಗಳನ್ನು ವಿತರಿಸಿದರು. ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ, ಸಹಕಾರಿಯ ಉಪಾಧ್ಯಕ್ಷ ಚಂದ್ರಶೇಖರ ಇಲ್ಲೂರು, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಆರವಿಂದ, ನೇತ್ರತಜ್ಞ ಶರಣಬಸವ, ಜನಹಿತ ಐಕೇರ್ ಸೆಂಟರ್ ಸಂಯೋಜಕ ಬಸಪ್ಪ ಪಟ್ಟೇದ, ಎಂಪಿಎಸ್‌ಎಸ್ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ, ಸಹಕಾರಿಯ ನಿರ್ದೇಶಕ ಶಂಭುಲಿಂಗಯ್ಯಸ್ವಾಮಿ ಇತರರಿದ್ದರು.