ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾರ್ಯದಕ್ಷತೆಯನ್ನು ಮೆರೆದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. 
ಜಿಲ್ಲೆ

ಅತ್ಯುತ್ತಮ ಸೇವೆ * ಅಪರಾಧ ನಿಯಂತ್ರಣದಲ್ಲಿ ಗಣನೀಯ ಸಾಧನೆ

Chethan padubidri

ಪ್ರಮುಖ ಮುಖ್ಯಾಂಶಗಳು

  • 29 ಪೊಲೀಸ್ ಅಧಿಕಾರಿ 118 ಸಿಬ್ಬಂದಿಗೆ ಪ್ರಶಂಸನಾ ಪತ್ರ
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ಠಾಣೆಗಳ ಅಪರಾಧ ಪ್ರಕರಣಗಳ ಪತ್ತೆ ಕಾರ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾರ್ಯದಕ್ಷತೆಯನ್ನು ಮೆರೆದ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಪೊಲೀಸ್ ಆಯುಕ್ತರು 29 ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ಹಾಗೂ 118 ಸಿಬ್ಬಂದಿಗೆ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
ಕಳೆದ ಆರು ತಿಂಗಳ ಅವಧಿಯಲ್ಲಿ 24 ಎಲ್.ಪಿ.ಸಿ. ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದ್ದು, ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್.ಬಿ.ಡಬ್ಲ್ಯೂ. ವಾರಂಟ್ ಹೊಂದಿದ್ದ ಆರೋಪಿಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಗಿದೆ.
2026ನೇ ಸಾಲಿನಲ್ಲಿ ಸೊತ್ತು ಕಳವು ಪ್ರಕರಣಗಳ ಪೈಕಿ 88 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವುದರೊಂದಿಗೆ ಸುಮಾರು 1 ಕೋಟಿ 20 ಲಕ್ಷ ಮೌಲ್ಯದ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದಲ್ಲಿ ತೊಡಗಿದ್ದ ಪೆಡ್ಲರ್ಸ್ ವಿರುದ್ಧ 84 ಪ್ರಕರಣಗಳನ್ನು ದಾಖಲಿಸಿ, 142 ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 346 ಪ್ರಕರಣಗಳನ್ನು ದಾಖಲಿಸಿ, 443 ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಪೆಡ್ಲರ್ಸ್ ಕುರಿತು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಸೈಬರ್ ಅಪರಾಧಗಳ ಪತ್ತೆ ಕಾರ್ಯದಲ್ಲಿಯೂ ಗಮನಾರ್ಹ ಸಾಧನೆ ಮಾಡಲಾಗಿದೆ. ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರನ್ನು ಗೌರವಿಸಲಾಯಿತು.
ಪ್ರಮುಖ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಾಗಿ, ತನಿಖಾ ಸಹಾಯಕ ರಾಗಿ ಹಾಗೂ ನ್ಯಾಯಾಲಯದ ಕರ್ತವ್ಯಗಳಲ್ಲಿ ಉತ್ತಮ ಸೇವೆ ಸಲ್ಲಿಸಿ, ಗುಣಮಟ್ಟದ ತನಿಖೆ ನಡೆಸುವ ಮೂಲಕ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ಶ್ರಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಹಾಗೆಯೇ 112 ತುರ್ತು ಸ್ಪಂದನ ಸಹಾಯವಾಣಿಯ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ನಗರದ ನಿಸ್ತಂತು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.