oplus_0 
ಜಿಲ್ಲೆ

ಸಮಷ್ಟಿ ಚಿಂತನೆಯಿಂದ ವ್ಯಕ್ತಿತ್ವಕ್ಕೆ ಶ್ರೇಷ್ಠತೆ

ಮರಿದೇವ ಹೂಗಾರ

ಹುಬ್ಬಳ್ಳಿ: ಮನುಷ್ಯ ತನ್ನ ಬದುಕನ್ನು ಕೇವಲ ವ್ಯಷ್ಟಿ ಪ್ರಣೀತ ವಿಚಾರಗಳಿಗೆ ತೊಡಗಿಸದೇ ಸಮಾಜಮುಖಿ ಜನಕಲ್ಯಾಣ ವಿಧಾಯಕ ಆಶಯಗಳಿಗೂ ತೆರೆದುಕೊಳ್ಳಬೇಕಾಗುತ್ತದೆ. ಜನಪರ ವಿಚಾರಗಳ ಸಮಷ್ಟಿ ಚಿಂತನೆಯಿಂದ ವ್ಯಕ್ತಿತ್ವಕ್ಕೆ ಶ್ರೇಷ್ಠತೆ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ತಮ್ಮ ಜಗದ್ಗುರು ಪೀಠಾರೋಹಣದ 33ನೆಯ ವರ್ಧಂತಿ ಹಾಗೂ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಆರ್.ಎಂ. ಹಿರೇಮಠ ಅವರ ಅಮೃತ ಮಹೋತ್ಸವ ನಿಮಿತ್ತ ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ತಮ್ಮ ಸರ್ಕಾರಿ ಸೇವೆಯುದ್ದಕ್ಕೂ ಪಾರದರ್ಶಕತೆ ರೂಢಿಸಿಕೊಂಡಿದ್ದ ಆರ್.ಎಂ. ಹಿರೇಮಠ ಅವರು ನಿವೃತ್ತಿ ನಂತರದಲ್ಲಿ ವಿಭಿನ್ನ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಷ್ಟಿಯ ನೆಲೆಯಲ್ಲಿ ಉನ್ನತ ವ್ಯಕ್ತಿತ್ವವನ್ನು ಸಂಪಾದಿಸಿದ್ದಾರೆ. ವೀರಶೈವ ಧರ್ಮದ ಪ್ರಸ್ಥಾನತ್ರಯಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಅನುಭಾವದ ಆಶಯಗಳನ್ನು ತಮ್ಮ ಬದುಕಿನಲ್ಲಿ ಆಚರಣೆಗೆ ತರುವ ಜತೆಗೆ ಇತರರ ಬದುಕಿಗೂ ರೂಢಿಸುವ ಅವರ ಸಂಕಲ್ಪದ ಸೇವೆಗಳು ಗಮನಸೆಳೆಯುತ್ತವೆ ಎಂದರು.
ಮೇಲ್ಪಂಕ್ತಿ: ಬದುಕಿನಲ್ಲಿ ಸತ್ಯ, ಶುದ್ಧ, ಸಾತ್ವಿಕ ಚೈತನ್ಯದ ಸಂಸ್ಕಾರ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆರ್.ಎಂ. ಹಿರೇಮಠರು ತಮ್ಮ 75ನೆಯ ಜನ್ಮದಿನದ ಸಂದರ್ಭದಲ್ಲಿ 80 ವೀರಮಾಹೇಶ್ವರ ಜಂಗಮ ವಟುಗಳಿಗೆ ಉಚಿತವಾಗಿ ಅಯ್ಯಚಾರ ಶಿವದೀಕ್ಷೆ ಸಂಸ್ಕಾರ ಸೇವೆ ಒದಗಿಸಿ ಹುಟ್ಟು ಹಬ್ಬಗಳ ಆಚರಣೆಗೆ ಮೇಲ್ಪಂಕ್ತಿ ಹಾಕಿದ್ದಾರೆ ಎಂದೂ ರಂಭಾಪುರಿ ಜಗದ್ಗುರುಗಳು ಹೇಳಿದರು.
ಸುಳ್ಳದ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಶ್ರೀಗುರುಲಿಂಗ ಶಿವಾಚಾರ್ಯರು, ಮೊರಬದ ಜಡಿಮಠದ ಶ್ರೀಮಹೇಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಿದರು.
ಪರಿಪೂರ್ಣ ಬಿಡುಗಡೆ: ಆರ್.ಎಂ. ಹಿರೇಮಠರ ಕುರಿತು ಲೇಖಕ ಗದಿಗಯ್ಯ ಹಿರೇಮಠ (ಜೀವಿ) ಬರೆದ ಪರಿಪೂರ್ಣ ಸಂಸ್ಮರಣ ಗ್ರಂಥವನ್ನು ಕೆಎಲ್‌ಇ ಸೊಸೈಟಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಬಿಡುಗಡೆಗೊಳಿಸಿದರು.
ಆರ್.ಎಂ. ಹಿರೇಮಠ ಅವರ ಅಮೃತ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳ ಸುಮಾರು 30 ಸಾಧಕರಿಗೆ ಗೌರವಿಸಲಾಯಿತು.
ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹಿರಿಯ ವರ್ತಕ ಜಿ.ಎಂ. ಚಿಕ್ಕಮಠ, ಉದ್ಯಮಿ ಎಸ್.ಸಿ. ಹಿರೇಮಠ, ಡಾ.ಕೆ.ಬಿ. ವಿರಕ್ತಮಠ, ಸುಮಂಗಲಾ ಹಿರೇಮಠ, ಡಾ.ಎಸ್.ಪಿ. ಬಳಿಗಾರ, ಆಯುರ್ವೇದ ತಜ್ಞ ಡಾ. ಮಹಾಂತಸ್ವಾಮಿ ಹಿರೇಮಠ, ಪ್ರಕಾಶ ಬೆಂಡಿಗೇರಿ, ವಿಶ್ವನಾಥ ಹಿರೇಗೌಡರ, ಡಾ. ರಾಮು ಮೂಲಗಿ, ವಿ.ಜಿ .ಪಾಟೀಲ, ಇಂದುಮತಿ ಮಾನ್ವಿ, ಚನ್ನಯ್ಯ ಚೌಕಿಮಠ, ಆದರ್ಶ ಕಲ್ಮಠ ಇತರರು ಇದ್ದರು. ಡಾ. ದೀಪಾ ಕಂಬಾಳಿಮಠ ಸ್ವಾಗತಿಸಿದರು. ಗದಗಯ್ಯ ಹಿರೇಮಠ ನಿರೂಪಿಸಿದರು.