ದೊಡ್ಡಬಳ್ಳಾಪುರ ತಾಲೂಕಿನ ರಾಜಟ್ಟದಲ್ಲಿ ಬೌದ್ಧನೆಲೆಯ ಉತ್ಖನನಕ್ಕೆ ಸಚಿವ ಎಚ್​.ಕೆ.ಪಾಟೀಲ್​, ಕೆ.ಎಚ್​.ಮುನಿಯಪ್ಪ ಚಾಲನೆ ನೀಡಿದರು. ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಸಂಶೋಧಕ ಎಂ.ಎಸ್​.ಕೃಷ್ಣಮೂರ್ತಿ, ಸಾಹಿತಿಗಳಾದ ಡಾ.ಎಲ್​.ಹನುಮಂತಯ್ಯ, ನಾಡೋಜ ಪ್ರೊ.ಹಂಪ ನಾಗರಾಜ್​, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು, ಬೆಂಗಳೂರಿನ ಬೌದ್ಧ ವಿಹಾರದ ಆನಂದ ಬಂತೇಜಿ, ಮಾಜಿ ಶಾಸಕ ವೆಂಕಟರಮಣಯ್ಯ, ರಾಜಾಟ್ಟ ಉತ್ಖನನ ಭೂಮಾಲೀಕ ಕೃಷ್ಣಪ್ಪ ಎನ್​.ಅಂಜಿನಪ್ಪ ಇದ್ದರು. 
ಜಿಲ್ಲೆ

ರಾಜಟ್ಟದಲ್ಲಿ ಬೌದ್ಧನೆಲೆ ಉತ್ಖನನ ಶುರು

ದೊಡ್ಡಬಳ್ಳಾಪುರ : ಬೌದ್ಧ ನೆಲೆಗಳನ್ನು ಪ್ರತಿಬಿಂಬಿಸುವ ಚೈತ್ಯ&ವಿಹಾರ ಸಂಕೀರ್ಣದ ಸಂಪೂರ್ಣ ಚಿತ್ರಣ ಬೆಳಕಿಗೆ ತರಲು ಬೌದ್ಧ ನೆಲೆ ಉತ್ಖನನಕ್ಕೆ ಚಾಲನೆ ನೀಡಲಾಗಿದ್ದು, ರಾಜಟ್ಟ ಮುಂದೆ ಮಹತ್ವದ ನೆಲೆಯಾಗಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಡಾ.ಎಚ್​.ಕೆ.ಪಾಟೀಲ್​ ಹೇಳಿದರು.

ತಾಲೂಕಿನ ರಾಜಟ್ಟದ ಬೂದಿಗುಂಡಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ರಾಜ್ಯದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ ಬುಧವಾರ ಬೌದ್ಧನೆಲೆಯ ಉತ್ಖನನಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜಟ್ಟ ಗ್ರಾಮದಲ್ಲಿ ಬೌದ್ಧನೆಲೆಯ ಕುರಿತಾದ ಸ್ತೂಪಗಳು ಹಾಗೂ ವಿವಿಧ ಅವಶೇಷಗಳು ಪತ್ತೆಯಾಗಿದ್ದು, ಕಾರಣಾಂತರದಿಂದ ಅಪೂರ್ಣಗೊಂಡಿದ್ದ ಉತ್ಖನನಕ್ಕೆ ಕೇಂದ್ರ ಪುರಾತತ್ವ ಇಲಾಖೆ ಅನುಮೋದನೆಯೊಂದಿಗೆ ಈಗ ರಾಜ್ಯ ಸರ್ಕಾರ ಮರು ಚಾಲನೆ ನೀಡಿದೆ. ಪ್ರೊ.ಎಂ.ಎಸ್​.ಕೃಷ್ಣಮೂರ್ತಿ ಈ ಉತ್ಖನನದ ಪ್ರಧಾನ ನಿರ್ದೇಶಕರಾಗಿದ್ದಾರೆ. 2001 ಮತ್ತು 2004ರಲ್ಲಿ ಸಂಶೋಧಕ ಪ್ರೊ.ಎಂ.ಎಸ್​.ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ರಾಜಟ್ಟದಲ್ಲಿ ಕ್ರಮಬದ್ಧವಾಗಿ ಉತ್ಖನನ ಕಾರ್ಯ ನಡೆದಿತ್ತು. ಅದರ ಫಲವಾಗಿ ಬೌದ್ಧ ಧಮೀರ್ಯರ ಚೈತ್ಯಾಲಯ ಮತ್ತು ಅದರ ಸುತ್ತಲೂ ನಿರ್ಮಿತವಾಗಿದ್ದ, ಬೌದ್ಧ ವಿಹಾರದ ಪಾಯದ ಅವಶೇಷಗಳು ಬೆಳಕಿಗೆ ಬಂದವು. ಈ ಮಹತ್ತರ ಉತ್ಖನನ ಕಾರ್ಯದಿಂದ ಬೌದ್ಧಧರ್ಮದ ಇತಿಹಾಸ, ಕುರುಹುಗಳು, ಮಾರ್ಗದರ್ಶನ ಹಾಗೂ ಬುದ್ಧನ ಸಂದೇಶ ಅರಿಯಲು ಸಹಕಾರಿಯಾಗಲಿದೆ ಎಂದರು.

ಅಡ್ಡಿಯಾಗದಿರಲಿ : ಬುದ್ಧನ ಸಂದೇಶಗಳು ಜನರ ಬದುಕಿಗೆ ಸಮೀಪವಾಗಿದ್ದು, ನಾವೆಲ್ಲರೂ ಬುದ್ಧನ ಸಂದೇಶ ಅರಿಯಬೇಕು. ಅವರ ಸಂದೇಶಗಳೇ ನಮಗೆ ಪ್ರೇರಣೆ ಎಂದ ಡಾ.ಎಚ್​.ಕೆ.ಪಾಟೀಲ್​, ಉತ್ಖನನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಕರ್ನಾಟಕದಲ್ಲಿ ಬೌದ್ಧಕಲೆ ಮತ್ತು ಸಂಸತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ, ಬೌದ್ಧ ಧರ್ಮವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ನಾವು ಬುದ್ಧನ ಸಿದ್ಧಾಂತ, ಅವನು ತೋರಿಸಿದ ಸುಖ ಜೀವನದ ದಾರಿಯನ್ನು ತಿಳಿದುಕೊಳ್ಳಬೇಕು. ರಾಜ್ಯ ಪುರಾತತ್ವ ಇಲಾಖೆ ರಾಜಟ್ಟದಲ್ಲಿ ಸಿಕ್ಕಿರುವ ಬೌದ್ಧ ಧರ್ಮದ ಚೈತ್ಯ&ವಿಹಾರ ಸಂಕೀರ್ಣದ ಸಂಪೂರ್ಣ ಚಿತ್ರಣ ಬೆಳಕಿಗೆ ತರುವ ಯೋಜನೆ ಹಮ್ಮಿಕೊಂಡಿದೆ. ಭೂಗರ್ಭದಲ್ಲಿ ಅಡಗಿರುವ ಬೌದ್ಧ ಮಂತ್ರ ಮುದ್ರಿತ ಮಣ್ಣಿನ ಬಿಲ್ಲೆಗಳು ಅವುಗಳ ಗಾತ್ರ ಅಗಲ ಚೈತ್ಯ ವಿಹಾರ ಎಲ್ಲವೂ ಬೌದ್ಧ ಧರ್ಮದ ಧಾರ್ಮಿಕ ಶಕ್ತಿ ಮತ್ತು ಮೌಲ್ಯ ಪ್ರತಿಬಿಂಬಿಸುತ್ತದೆ. ಹಾಗಾಗಿ ಇದರ ಸಂಪೂರ್ಣ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸಬೇಕು. ನಮ್ಮ ಇತಿಹಾಸ ಅರಿಯುವ ನಿಟ್ಟಿನಲ್ಲಿ ಉತ್ಖನನ ಕಾರ್ಯಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.

ಉತ್ಖನನಕ್ಕೆ ಕಾರಣವಿದು! : ರಾಜಟ್ಟದಲ್ಲಿ ಸುಮಾರು 1,500 ವರ್ಷಗಳ ಹಿಂದೆ ಪ್ರಾಚಿನ ಮಹಾಯಾನ ಬೌದ್ಧ ವಿಹಾರ ಮತ್ತು ಚೈತ್ಯದ ಅವಶೇಷಗಳು ಪತ್ತೆಯಾಗಿದ್ದು, ಇದು ರಾಜ್ಯದಲ್ಲಿ ಮಹಾಯಾನ ಬೌದ್ಧಧರ್ಮಕ್ಕೆ ಸಂಬಂಧಿಸಿದ ರಚನೆಗಳ ಮೊದಲ ಪುರಾತತ್ತ$್ವ ಶಾಸದ ಆವಿಷ್ಕಾರವಾಗಿದೆ. ಈ ಸ್ಥಳವನ್ನು 2001 ಮತ್ತು 2004 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ನಿವೃತ್ತ ಪೊ. ಎಂ.ಎಸ್​.ಕೃಷ್ಣಮೂರ್ತಿ ಉತ್ಖನನ ಮಾಡಿದರು. ಆದರೆ, ಈ ಉತ್ಖನನ ಪರಿಪೂರ್ಣವಾಗಿರಲಿಲ್ಲ. ಹಾಗಾಗಿ ರಾಜಟ್ಟದಲ್ಲಿನ ಚೈತ್ಯದ ಅವಶೇಷಗಳ ಆವಿಷ್ಕಾರವು ಹೆಚ್ಚಿನ ಮಹತ್ವದ್ದಾಗಿದೆ. ಬೆಂಗಳೂರಿನಲ್ಲಿ ಮಹಾಯಾನ ಬೌದ್ಧಧರ್ಮದ ಉಪಸ್ಥಿತಿಯ ಮೇಲೆ ಬೆಳಕು ಚೆಲ್ಲುವುದಲ್ಲದೆ, ಕರ್ನಾಟಕ ಮತ್ತು ದಣ ಭಾರತದ ಉಳಿದ ಭಾಗಗಳಲ್ಲಿ ಮೊದಲ ಸಹಸ್ರಮಾನದ ಅವಧಿಯಲ್ಲಿ ಬೌದ್ಧ ಪದ್ಧತಿಗಳು ಮತ್ತು ಜೀವನದ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸುತ್ತದೆ. ರಾಜಟ್ಟ ಎಂಬುದು ದೆಹಲಿಯ ರಾಜ್​ ಘಾಟ್​ನಿಂದ ವಲಸೆ ಬಂದ ಬೌದ್ಧರ ನೆಲೆಯಾಗಿತ್ತು ಎಂಬುದು ಬೌದ್ಧ ಅನುಯಾಯಿಗಳ ವಾದವಾಗಿದೆ. ರಾಜಟ್ಟ ಗ್ರಾಮವು 2ನೇ ಶತಮಾನದಿಂದ 7ನೇ ಶತಮಾನದವರೆಗೆ ಬೌದ್ಧ ವಸಾಹತು ಪ್ರದೇಶವಾದ್ದು, ಬೌದ್ಧರ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು ಎಂಬ ಮಾತುಗಳು ಕೇಳಿಬಂದಿವೆ. ರಾಜಟ್ಟ ಕ್ರಿಸ್ತ ಪೂರ್ವದಲ್ಲಿ ಬೌದ್ಧರ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಈ ಗ್ರಾಮದ ಸುಮಾರು 40 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಬೌದ್ಧ ಪಳೆಯುಳಿಕೆಗಳು ಹುದುಗಿವೆ ಎನ್ನಲಾಗಿದೆ.