ಕಲಬುರಗಿ: ಜವಾಹರ ನವೋದಯ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಿ, ಅಕ್ರಮದಲ್ಲಿ ಭಾಗಿಯಾದ ಸರ್ಕಾರಿ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಭಾರತೀಯ ಯುವ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರಕರ್ ಆಗ್ರಹಿಸಿದರು.
ಆಳಂದ ಪಟ್ಟಣದಲ್ಲಿ ೨೦೨೩ರ ಏಪ್ರಿಲ್ ೨೯ರಂದು ನಡೆದ ಪರೀಕ್ಷೆ ವೇಳೆ ಕೇಂದ್ರವೊಂದಕ್ಕೆ ಪಡಸಾವಳಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ಪ್ರವೇಶಿಸಿ, ಪ್ರಶ್ನೆ ಪತ್ರಿಕೆಗಳನ್ನು ಖಾಸಗಿ ಕೋಚಿಂಗ್ ಸೆಂಟರ್‌ನವರಿಗೆ ಕಳುಹಿಸಿದ್ದು, ಅವರು ತಮ್ಮ ಮಕ್ಕಳಿಗೆ ಉತ್ತರ ಹೇಳಿ ಅಕ್ರಮ ನಡೆಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ತಾಲೂಕಿನಲ್ಲೇ ಒಂದೇ ಕೋಚಿಂಗ್ ಸೆಂಟರ್‌ನ ೧೪ ವಿದ್ಯಾರ್ಥಿಗಳು ನವೋದಯಕ್ಕೆ ಆಯ್ಕೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹಣ ನೀಡಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, ಉತ್ತರ ಬರೆದು ಉತ್ತೀರ್ಣರಾಗಿದ್ದಾರೆ. ಇದರಿಂದ ನಿರಂತರವಾಗಿ ಅಧ್ಯಯನ ಮಾಡಿದ ಬಡ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನವೋದಯ ಪ್ರವೇಶ ಕೈತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಆಯುಕ್ತರಿಗೆ ಮಾಹಿತಿ ನೀಡಿದರು ಸ್ಪಂದಿಸುತ್ತಿಲ್ಲ. ಕೂಡಲೇ ತಪ್ಪಿತಸ್ಥರನ್ನು ಅಮಾನತು ಮಾಡಬೇಕು. ಜನೆವರಿಯಲ್ಲಿ ಪುನಃ ಪರೀಕ್ಷೆ ನಡೆಯಲಿದ್ದು, ಅದರ ಮೇಲೆ ನಿಗಾ ಇಟ್ಟು, ಪ್ರತಿಭಾವಂತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ದೇವೇಂದ್ರ ಶವರೆ, ಅರ್ಜುನ ಇಂಗಳೆ, ಮಲಕಣ್ಣ ಪರೇಣಿ, ಶ್ರೀಶೈಲ ಹಿರೇಮಠ ಇತರರಿದ್ದರು.