ಕುರುಗೋಡು: ಸಮೀಪದ ಯಲ್ಲಾಪುರ ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿ ಕೆ.ಎಂ.ನೇತ್ರಾವತಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪರೀಕ್ಷಾ ಪೇ ಚರ್ಚಾ-2020 ನೇರ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.
ದೆಹಲಿಯಲ್ಲಿ ಜ.19, 20ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಪರೀಕ್ಷಾ ಪೇ ಚರ್ಚಾ ನೇರ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಆಯ್ಕೆ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಕೆ.ಎಂ.ನೇತ್ರಾವತಿ ಪಾತ್ರರಾಗಿದ್ದಾರೆ. ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನೇತ್ರಾವತಿ ಅಭ್ಯಾಸ ಮಾಡುತ್ತಿದ್ದಾರೆ.
ಗ್ರಾಮಸ್ಥರಿಂದ ಸನ್ಮಾನ: ಪರೀಕ್ಷಾ ಪೇ ಚರ್ಚಾ ನೇರ ಸಂವಾದಕ್ಕೆ ಆಯ್ಕೆಯಾದ ವಿಷಯ ತಿಳಿಯುತ್ತಿದ್ದಂತೆ ಯಲ್ಲಾಪುರ ಗ್ರಾಮಸ್ಥರು ಭಾನುವಾರ ನೇತ್ರಾವತಿ ಮನೆಗೆ ಹೋಗಿ ಸನ್ಮಾನ ಮಾಡಿದರು. ಪ್ರಧಾನಿಯೊಂದಿಗೆ ಎರಡು ದಿನ ನಡೆಯುವ ನೇರ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಈ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ನೇತ್ರಾವತಿ ಚರ್ಚಿಸಲಿ ಎಂದು ಹಾರೈಸಿದರು. ಮುಖಂಡರಾದ ಕುಮಾರಸ್ವಾಮಿ, ಕೆ.ಎರ‌್ರಿಸ್ವಾಮಿ, ವಿ.ಚನ್ನನಗೌಡ, ಎಚ್.ವೀರೇಶಗೌಡ, ವೈ.ಲೋಕೇಶ್, ಕೆಎಂ.ಬಸವರಾಜಸ್ವಾಮಿ, ಭೀಮನಗೌಡ, ಎಚ್.ಗಾಳೆಮ್ಮ, ಎಚ್.ಉಮೇಶ್, ಪೋಷಕರಾದ ಪಂಪಯ್ಯಸ್ವಾಮಿ, ಪಶುಪತಿಗೌಡ, ಮೌಲಪ್ಪ ಇತರರಿದ್ದರು.