ಜಿಲ್ಲೆ

ಗುರುಪಾದೇಶ್ವರ ಮೇಲಾಣೆ ಹೊಂದಾಣಿಕೆ ಇಲ್ಲ, ಬಬಲೇಶ್ವರದಲ್ಲಿ ಬಿಜೆಪಿ ಗೆಲುವು ಶತಃಸಿದ್ಧ ಎಂದ ಜಿಪಂ ಮಾಜಿ ಅಧ್ಯಕ್ಷ ಕೋಳಕೂರ !

ವಿಜಯಪುರ: ಬಬಲೇಶ್ವರ ವಿಧಾನ ಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಹಿಂದುತ್ವದ ತತ್ವ ಸಿದ್ಧಾಂತ ಮೆಚ್ಚಿ ನೂರಾರು ಯುವಕರು ವಿವಿಧ ಪಕ್ಷಗಳನ್ನು ತೊರೆದು ಬುಧವಾರ ಬಿಜೆಪಿ ಸೇರ್ಪಡೆಯಾದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ನೇತೃತ್ವದಲ್ಲಿ ಪಕ್ಷದ ಬಾವುಟ ಹಿಡಿದು ಯುವಕರು ಬಿಜೆಪಿ ಸೇರ್ಪಡೆಗೊಂಡರು. ಮುಖಂಡ ಉಮೇಶ ಕೋಳಕೂರ ಕೇಸರಿ ಶಾಲು ಹೊದಿಸಿ, ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸಾಕಷ್ಟು ಪ್ರಗತಿ ಕಾರ್ಯ ಕೈಗೊಂಡಿದ್ದಾರೆ. ಹೀಗಾಗಿ ಯುವ ಜನತೆ ಬಿಜೆಪಿಯತ್ತ ವಾಲುತ್ತಿದ್ದಾರೆ. ಬಿಜೆಪಿಯ ತತ್ವ ಸಿದ್ಧಾಂತಕ್ಕೆ ಯುವ ಜನತೆ ಮಾರುಹೋಗುತ್ತಿದ್ದಾರೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ಜೊತೆಗೆ ಬಬಲೇಶ್ವರದಲ್ಲೂ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದ್ದು, ಇದಕ್ಕೆ ಯುವಕರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದೇ ಸಾಕ್ಷಿ ಎಂದರು.

ವ್ಯಕ್ತಿಗತ ರಾಜಕಾರಣಕ್ಕೆ ಆದ್ಯತೆ ನೀಡದೆ ಪಕ್ಷದ ತತ್ವದ ತಳಹದಿ ಮೇಲೆ ರಾಜಕಾರಣ ಮಾಡುವ ಮಹದಾಸೆಯೊಂದಿಗೆ ನಾನು ಬಿಜೆಪಿಗೆ ಬಂದಿದ್ದೇನೆ. ನನ್ನಂತೆಯೇ ಇಂದು ಅನೇಕರು ಪಕ್ಷದ ತತ್ವ ಸಿದ್ದಾಂತ ನಂಬಿ ಬರುತ್ತಿದ್ದಾರೆ. ಆದರೆ, ಕೆಲವರು ನಾನು ಕಾಂಗ್ರೆಸ್‌ನೊಂದಿಗೆ ಒಳವೊಪ್ಪಂದ ಮಾಡಿಕೊಂಡಿರುವುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಗುರುಪಾದೇಶ್ವರ ಆಣೆಗೂ ಅದೊಂದು ಸುಳ್ಳು ಸುದ್ದಿ. ಅಂಥ ಸಂಶಯವಿದ್ದಲ್ಲಿ ಎಲ್ಲರೂ ಒಟ್ಟಾಗಿ ದೇವಸ್ಥಾನ ಪ್ರವೇಶಿಸೋಣ ಎಂದರು.

ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಪ್ರಚಾರ ಮಾಡೋಣ. ಒಮ್ಮತದಿಂದ ಗೆಲ್ಲಿಸೋಣ. ಪಕ್ಷ ಅಧಿಕಾರಕ್ಕೆ ಬರಬೇಕೆಂಬುದೇ ನಮ್ಮೆಲ್ಲರ ಮಹತ್ತರ ಉದ್ದೇಶ. ಖಂಡಿತವಾಗಿಯೂ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಠ್ಠಲ ಕಿರಸೂರ ಮಾತನಾಡಿ, ರಾಜ್ಯ ಸರ್ಕಾರ ತರುತ್ತಿರುವ ಕಾರ್ಯಕ್ರಮಗಳನ್ನು ನಂಬಿ ಇಂದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದರು.

ಮುಖಂಡರಾದ ಮಲ್ಲು ಕನ್ನೂರ, ಈರಣ್ಣ ಶಿರಮಗೊಂಡ, ಬಸವರಾಜ ಕುರುವಿನಶೆಟ್ಟಿ, ಗುರು ಪಟ್ಟಣ, ಡಾ. ಮಾಂತೇಶ ಕನ್ನೂರ, ರಮೇಶ ಜುಮನಾಳ, ಬಸವರಾಜ ಸಿಂಧೂರ, ಬಸಲಿಂಗಪ್ಪ ಜಂಗಮಶೆಟ್ಟಿ, ಗುರುಪಾದಪ್ಪ ಜಂಗಮಶೆಟ್ಟಿ, ಸಂತೋಷ ತಮಗೊಂಡ ಮತ್ತಿತರರಿದ್ದರು.