ಉಡುಪಿ: ತಾಲೂಕಿನ ಕೊಡವೂರು ಗ್ರಾಮ ಸಮೀಪದ ತೊಟ್ಟಂ ನಿವಾಸಿ, ಇಂಡಿಯನ್ ಏರ್ ಪೋರ್ಸ್ನ ನಿವೃತ್ತ ಯೋಧ ಪಿ.ಜೆ.ಡಿ. ಅಲ್ಮೇಡಾ (93) ಜೂ.19ರಂದು ನಿಧನ ಹೊಂದಿದ್ದಾರೆ. ಅವರಿಗೆ ಪತ್ನಿ, ಐದು ಹೆಣ್ಣು ಮಕ್ಕಳು, ಓರ್ವ ಪುತ್ರ ಇದ್ದಾರೆ.
1931ರ ಮಾರ್ಚ್ 22ರಂದು ಎಫ್. ಎಕ್ಸ್. ಡಿ. ಅಲ್ಮೇಡಾ ಮತ್ತು ತೆರೆಸಾ ಡಿಸೋಜಾ ದಂಪತಿ ಪುತ್ರರಾದ ಇವರು, ಉಡುಪಿ ತಾಲೂಕಿನ ಕೋಟೆ ಗ್ರಾಮದಲ್ಲಿ ಜನಿಸಿದ್ದರು. ಕಟಪಾಡಿಯ ಎಸ್ವಿಎಚ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಬಳಿಕ 1956ರ ಮಾರ್ಚ್ 25ರಂದು ಭಾರತೀಯ ವಾಯುಸೇನೆ ಸೇರ್ಪಡೆಯಾದರು.
ವಾಯುಸೇನೆಯ ಸೇವಾವಧಿಯಲ್ಲಿ 1961ರಲ್ಲಿ ನಡೆದ ಆಪರೇಷನ್ ಗೋವಾ, 1962ರಲ್ಲಿ ನಡೆದ ಚೈನಾ ಆಗ್ರೇಷನ್ ಮತ್ತು 1965ರಲ್ಲಿ ನಡೆದಿದ್ದ ಪಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು, ಮದ್ರಾಸ್, ಕಾನ್ಪುರ ಮತ್ತು ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ 1967 ಡಿಸೆಂಬರ್ 26ರಂದು ನಿವೃತ್ತರಾಗಿದ್ದರು. ಬಳಿಕ ವಿವಿಧ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದರು. ಎನ್ಐಎಸ್ ಕೋಚ್ (ಅಥ್ಲೆಟಿಕ್ಸ್), ಮಲ್ಪೆಯ ರಾಜ್ ಫೀಶ್ ಮೀಲ್ನ ಮೆನೇಜರ್ ಆಗಿಯೂ ನಿವೃತ್ತರಾಗಿದ್ದರು. ಉಡುಪಿಯಲ್ಲಿ ಮಾಜಿ ಸೈನಿಕರ ವೇದಿಕೆ ಸ್ಥಾಪಿಸಿದ ಹೆಗ್ಗಳಿಕೆ ಹೊಂದಿದ್ದು, ಸ್ಥಾಪಕಾಧ್ಯಕ್ಷರೂ ಆಗಿದ್ದರು. ವೇದಿಕೆ ವತಿಯಿಂದ 2018ರಲ್ಲಿ ಇವರನ್ನು ಸನ್ಮಾನಿಸಲಾಗಿತ್ತು. ಪ್ರಸ್ತುತ ಉಡುಪಿಯ ತೊಟ್ಟಂ ಎಂಬಲ್ಲಿ ತನ್ನ ಮಕ್ಕಳು, ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು.