ಜಿಲ್ಲೆ

ಪ್ರಧಾನಿ ಮೋದಿಯವರಿಗೆ ಮಾಜಿ ಪ್ರಧಾನಿ ದೇವೇಗೌಡ ಅವರು ನೀಡಿದ ಸಲಹೆಗಳೇನು?

Bengaluru - Political - Vilas Melagiri

ಬೆಂಗಳೂರು : ಕರೊನಾ ಲಸಿಕೆ ವೆಚ್ಚವನ್ನು ಕೈಗೆಟುಕುವ ರೀತಿಯಲ್ಲಿ ಇಡಬೇಕು. ಆರ್ಥಿಕ ದುರ್ಬಲರಿಗೆ ಸರ್ಕಾರ ಉಚಿತವಾಗಿ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದರು.
ಕರೊನಾ ಸ್ಥಿತಿಗತಿ, ಲಸಿಕೆಯ ಸಂಶೋಧನಾ ಪ್ರಗತಿ ಕುರಿತು ಪ್ರಧಾನಿ ಮೋದಿ ನಡೆಸಿದ ಸರ್ವಪಕ್ಷಗಳ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ, ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟರಲ್ಲದೆ, ಕೆಲವು ಸಲಹೆಗಳನ್ನು ನೀಡಿದರು.  ಕರೊನಾ ಲಸಿಕೆಯನ್ನು ಗ್ರಾಮ ಪಂಚಾಯತಿ ಹಂತಕ್ಕೆ ತಲುಪಿಸಲು ವ್ಯವಸ್ಥಿತವಾದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕಾರ್ಯಕರ್ತರ ತಂಡವನ್ನು ರಚಿಸಬೇಕು ಎಂದು ಹೇಳಿದರು.

ಲಸಿಕೆ ಬಗ್ಗೆ ಪ್ರಧಾನಿ ಕಚೇರಿ ಸಂಪರ್ಕ: ದೇಶದಲ್ಲಿ ಲಸಿಕೆ ಸಂಗ್ರಹ ಮತ್ತು ಸಾಗಣೆ ದೊಡ್ಡ ಸವಾಲಾಗಿದೆ. ಈ ವಿಷಯವಾಗಿ ನೇರವಾಗಿ ಪ್ರಧಾನಿ ಕಚೇರಿಯೊಂದಿಗೆ ಸಂಪರ್ಕ ಹೊಂದಿರುವ ಉನ್ನತಮಟ್ಟದ ತಂಡವೊಂದನ್ನು ರಚಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದವರೆಗೂ ಸಂಪರ್ಕ ಹೊಂದಿರುವ ಸರ್ಕಾರದ ಯೋಜಿತ ಜಾಲವೊಂದನ್ನು ಸೃಷ್ಟಿಸಬೇಕೆಂದು ಸಲಹೆ ನೀಡಿದರು.

ಸಾಮಾನ್ಯ ಕೊಠಡಿ ಶೈತ್ಯಾಗಾರ ಮಾಡಿ:  ಲಸಿಕೆಯನ್ನು ದೀರ್ಘ ಕಾಲ ಸಂರಕ್ಷಿಸಿಡಲು ದೊಡ್ಡ ಪ್ರಮಾಣದ ಶೈತ್ಯಾಗಾರಗಳ ಅಗತ್ಯವಿದೆ. ಈ ಸವಾಲನ್ನು ಎದುರಿಸಲು ಪ್ರಧಾನಿ ಮೋದಿ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿಎಸ್) ಸಲಹೆ ಪಡೆಯಬೇಕು. ಸಾಮಾನ್ಯ ಕೊಠಡಿಗಳನ್ನು ಶೈತ್ಯಾಗಾರಗಳನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಲಸಿಕೆ ಸಾಮಾನ್ಯರಿಗೆ ಕೈಗೆಟುಕಬೇಕು: ಲಸಿಕೆಯ ದರ ಜನ ಸಾಮಾನ್ಯರ ಕೈಗೆಟುಕುವಂತಿರಬೇಕು. ಸರ್ಕಾರ ದುರ್ಬಲ ವರ್ಗದವರಿಗೆ ಉಚಿತವಾಗಿ ಲಸಿಕೆ ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಬೇಕು. ಲಸಿಕೆಯ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆಯೇ ಅಥವಾ ರಾಜ್ಯ ಸರ್ಕಾರದ ಪಾಲು ಇದೆಯೇ ಎಂದೂ ದೇವೇಗೌಡರು ಪ್ರಶ್ನಿಸಿದರು.

ಕೇಂದ್ರ ಮತ್ತಷ್ಟು ಕ್ರಮ ಕೈಗೊಳ್ಳಲಿ: ವಿದೇಶದಿಂದ ನಾವು ಲಸಿಕೆಯನ್ನು ಖರೀದಿ ಮಾಡುತ್ತಿದ್ದೇವೆ. ನಮಲ್ಲಿಯೇ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಸಾಮರ್ಥ್ಯವಿಲ್ಲವೆ?, ಮೂರನೇ ಹಂತದ ಪ್ರಯೋಗಕ್ಕೆ ಒಳಗಾದ ಲಸಿಕೆ ಸುರಕ್ಷಿತವಾಗಿರುತ್ತದೆಯೆ? ಮತ್ತು ಅದರ ಸಾಮರ್ಥ್ಯ ನಂಬಲಾರ್ಹವೆ ? ಎಂದು ಕೇಳಿದರು.
ಮೊದಲ ಹಂತದಲ್ಲಿ ಎಷ್ಟು ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಪ್ರಶ್ನಿಸಿರುವ ಅವರು, ಅನಪೇಕ್ಷಿಯವಾಗಿ ಸೃಷ್ಟಿಯಾದ ಕರೊನಾ ಸಂಕಷ್ಟವನ್ನು ಶೀಘ್ರ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತಷ್ಟು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.