ಕೋಲಾರ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ಕೆ.ಆರ್.ರಮೇಶ್ ಕುಮಾರ್ ಬಣದ ನಡುವಿನ ರಾಜಕೀಯ ಮತ್ಸರ ಕೊನೆಗಾಣಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಖಾಡಕ್ಕೆ ಇಳಿದಿದ್ದಾರೆ.
ಗುರುವಾರ ಸಂಜೆ ಎಐಸಿಸಿ ಕಾಯಂ ಆಹ್ವಾನಿತ ಸದಸ್ಯ ಮುನಿಯಪ್ಪ ನಿವಾಸಕ್ಕೆ ತೆರಳಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿ ಎರಡೂ ಬಣದಲ್ಲಿ ಕುತೂಹಲ ಮೂಡಿಸಿದ್ದಾರೆ. ವಿಧಾನಸಭೆ ಮತ್ತು ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆ ಹಾಗೂ ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದುಕೊಡುವ ಸಲುವಾಗಿ ಪಕ್ಷದ ಹಿರಿಯರ ಆಶೀರ್ವಾದ ಪಡೆಯಲು ಮುನಿಯಪ್ಪ ಮನೆಗೆ ಹೋಗಿರಬಹುದೆಂಬ ಮಾತು ಕೇಳಿ ಬಂದಿದೆಯಾದರೂ ಮುನಿಯಪ್ಪ, ರಮೇಶ್‌ಕುಮಾರ್ ಬಣಗಳನ್ನು ಒಂದಾಗಿಸುವುದು ಪ್ರಮುಖ ಉದ್ದೇಶ ಎಂಬುದು ಕೈ ಮುಖಂಡರ ವಿಶ್ಲೇಷಣೆ.
ಭವಿಷ್ಯದ ದೃಷ್ಟಿಯಿಂದ ಬಣ ರಾಜಕೀಯ ಅಂತ್ಯಗೊಳ್ಳಲು ನಿಮ್ಮ ಸಹಕಾರ ಅಗತ್ಯವೆಂದು ಮುನಿಯಪ್ಪ ಅವರಿಗೆ ಡಿಕೆಶಿ ತಿಳಿಸಿದ್ದಾರೆ ಎನ್ನಲಾಗಿದ್ದು, ಬೇರೆಯವರ ರೀತಿ ಕತ್ತುಕೊಯ್ಯುವ ಜಾಯಮಾನ ನನ್ನದಲ್ಲ ಎಂದು ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಬಗ್ಗೆ ಆಕ್ರೋಶ:ಬಿಜೆಪಿ ಕಿರುಕುಳದ ಬಗ್ಗೆ ಪ್ರಸ್ತಾಪಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರದಿದ್ದರೆ ನಮ್ಮ-ನಿಮ್ಮ ಗತಿ ಗೋವಿಂದ, ಭಿನ್ನಮತ ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡದಿದ್ದರೆ ಪಕ್ಷಕ್ಕೆ ಮಾತ್ರವಲ್ಲ, ನಮ್ಮೆಲ್ಲರಿಗೂ ಕಾಟ ತಪ್ಪಿದ್ದಲ್ಲ, ಉಪ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳು ಗೆಲ್ಲದಿದ್ದರೆ ಬಿಜೆಪಿ ಕಟ್ಟಿಹಾಕಲು ಕಷ್ಟವಾಗುತ್ತದೆ ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಸಹ ಬೆಂಬಲ ನೀಡುವುದು ಅನುಮಾನ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಉಂಟಾಗಿರುವ ಕಾಳಗದಿಂದ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಡ್ಯಾಮೇಜ್ ಕಂಟ್ರೋಲ್‌ಗೆ ಪ್ರಯತ್ನಿಸಲಾಗುತ್ತಿದೆ, ಈಗ ನಡೆಯಲಿರುವ ಚುನಾವಣೆಯಲ್ಲಿ ಪಕ್ಷ ಸೋತರೆ ಅದರ ಜವಾಬ್ದಾರಿ ನನ್ನ ಮೇಲೆ ಹಾಕಬಹುದು, ಹೈಕಮಾಂಡ್‌ಗೆ ತಾವು ಹತ್ತಿರವಿರುವುದರಿಂದ ರಾಜ್ಯದ ಪರಿಸ್ಥಿತಿ ತಿಳಿಸಿ ಪಕ್ಷ ಸಂಘಟನೆಗೆ ಹೆಗಲು ನೀಡುವಂತೆ ಕೋರಿದರು ಎನ್ನಲಾಗಿದೆ.
ಕಾರ್ಯಕರ್ತರಲ್ಲಿ ಜಿಜ್ಞಾಸೆ: ಡಿಕೆಶಿ ಜತೆ ಒಂದು ತಾಸು ಮಾತನಾಡಿದ ಮುನಿಯಪ್ಪ, ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂಬ ಭರವಸೆಯಿದ್ದರೆ ಯಾರನ್ನಾದರೂ ಸೇರಿಸಿಕೊಳ್ಳಿ, ಆದರೆ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನೆ ಬಿಡಲಾರೆ, ನನ್ನ ಸೋಲಿಗೆ ಕಾರಣರಾದವರ ಜತೆ ರಾಜಿಗೆ ನಾನು ಸಿದ್ಧ, ಆದರೆ ಅವರು ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ಧರೇ ಎಂದು ಕೇಳಿದಾಗ ಆಗಿದ್ದು ಆಗಿ ಹೋಯಿತು, ಹಳೆಯ ವಿಚಾರಗಳನ್ನು ಮರೆತು ಒಂದಾಗಿ, ಉಪ ಚುನಾವಣೆ ಬಳಿಕ ಎಲ್ಲರನ್ನೂ ಸೇರಿಸಿ ಸಭೆ ಮಾಡುತ್ತೇನೆ, ನೀವು ಕೋಲಾರದ ಚಿಂತೆ ಬಿಟ್ಟು ರಾಜ್ಯದಲ್ಲಿ ಸುತ್ತಾಡಿ ಪಕ್ಷ ಕಟ್ಟಿ ಎಂದು ಡಿಕೆಶಿ ಹೇಳಿ ಹೋಗಿದ್ದು, ಹಾವು-ಮುಂಗುಸಿ ಒಂದಾಗುವುದೇ ಎಂಬ ಕುತೂಹಲ ಹುಟ್ಟಿಸಿದೆ.
ಜಿಲ್ಲೆಯ ಮುಖಂಡರಲ್ಲಿ ಉಂಟಾಗಿರುವ ಭಿನ್ನಮತ ಶಮನ ಸಂಬಂಧ ಕಳೆದ ಜೂನ್‌ನಲ್ಲೇ ಜಿಲ್ಲೆಗೆ ಭೇಟಿ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಲವು ತೋರಿದ್ದರು. ಪಕ್ಷ ಬಲಪಡಿಸುವ ಉದ್ದೇಶದಿಂದ ಹಿರಿಯ ಮುಖಂಡರೊಂದಿಗೆ ಚರ್ಚಿಸಿದ್ದಾರೆ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿಯಾಗಿರುವುದೂ ಸಹ ಇದೇ ಉದ್ದೇಶಕ್ಕಾಗಿ. ಇದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಕೆ.ಚಂದ್ರಾರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾನು ಪಕ್ಷದ ಶಿಸ್ತಿನ ಸಿಪಾಯಿ, ಬೇರೆಯವರಂತೆ ಕೆಟ್ಟ ರಾಜಕಾರಣ ಮಾಡಿಲ್ಲ, ಕೆಪಿಸಿಸಿ ಅಧ್ಯಕ್ಷರು ಪಕ್ಷ ಬಲಪಡಿಸಲು ಹೋರಾಡುತ್ತಿದ್ದಾರೆ, ಇವರಿಗೆ ನನ್ನ ಬೆಂಬಲವಿದೆ, ಜಿಲ್ಲೆಯಲ್ಲಿ ಪಕ್ಷ ಸೋಲಿಗೆ ನಾನು ಕಾರಣನಲ್ಲ, ನನ್ನ ವಿರುದ್ಧ ಕೆಲಸ ಮಾಡಿದವರಿಗೆ ದೇವರು ಬುದ್ಧಿ ಕೊಡಲಿ, ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಬದ್ಧ, ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಕೈ ಗೆಲ್ಲುವುದು ನಿಶ್ಚಿತ. ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ