ಜಿಲ್ಲೆ

ವಿಧಾನ ಪರಿಷತ್ ಚಿಂತಕರ ಚಾವಡಿ,  ಮಾಜಿ ಎಂಎಲ್ ಸಿ ಮೋಹನ ಲಿಂಬಿಕಾಯಿ ಅಭಿಮತ

Dharwada - Basavaraj Idli

ಹುಬ್ಬಳ್ಳಿ: ವಿಧಾನ ಪರಿಷತ್ ಚಿಂತಕರ ಚಾವಡಿಯಾಗಿದ್ದು, ಸಮಾಜ ಮತ್ತು ರಾಜ್ಯದ ಪ್ರಗತಿಯ ಕುರಿತು ಚಿಂತನೆ ಮತ್ತು ಅನುಸಂಧಾನ ನಡೆಯಬೇಕು. ಅದು ಇಂದು ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಮತದಾರರು ಯೋಗ್ಯರನ್ನು ಆರಿಸಬೇಕು. ಆಯ್ಕೆಯಾದವರು ಅಧಿಕಾರದ ದೃಷ್ಟಿಯಿಂದ ಅಲ್ಲ, ಜವಾಬ್ದಾರಿಯ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಕ್ಷೇತ್ರಕ್ಕೆ ನ್ಯಾಯ ದೊರಕುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅಭಿಪ್ರಾಯಪಟ್ಟರು.

ನಗರದ ಗೋಕುಲ ರಸ್ತೆ ಸಂಜೀವಿನಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮತದಾರರ ನೋಂದಣಿ ಕುರಿತು ಜಾಗೃತಿ ಸಭೆಯಲ್ಲಿ ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಆಸಕ್ತಿ ವ್ಯಕ್ತಪಡಿಸಿ ಅವರು ಮಾತನಾಡಿದರು.

2008ರಲ್ಲಿ ಈ ಕ್ಷೇತ್ರದಿಂದ ಭಾರೀ ಮತಗಳ ಅಂತರದಿಂದ ಆಯ್ಕೆಯಾಗಿ ಜನಪರ ಕೆಲಸಗಳಿಗೆ ಆದ್ಯತೆ ನೀಡಲಾಗಿತ್ತು. 23 ಸಾವಿರ ಸರ್ಕಾರಿ ದಿನಗೂಲಿ ನೌಕರರನ್ನು ಖಾಯಂಗೊಳಿಸುವುದು, ಆರ್ಥಿಕ ಸಂಕಷ್ಟದಲ್ಲಿದ್ದ ಎನ್ ಜಿಇಎಫ್ ಸಂಸ್ಥೆಗೆ 10 ಕೋಟಿ ರೂ. ಸರ್ಕಾರದ ವಿಶೇಷ ಅನುದಾನ ತರಲು ಶ್ರಮ ವಹಿಸಿದ್ದೆ. ಈ ಮೂಲಕ 80 ನೌಕರರ ಸೇವಾ ಭದ್ರತೆಯನ್ನು ಕಾಪಾಡಲು ಸಾಧ್ಯವಾಗಿತ್ತು. ಪ್ರಸ್ತುತ ನಿರುದ್ಯೋಗಿ ಪದವೀಧರರಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವುದು ತಮ್ಮ ಮುಂದಿನ ಉದ್ದೇಶ ಎಂದು ಅವರು ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡ, ಕಾಶಿಯಾ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅತಿಥಿಗಳಾಗಿ ಮಾತನಾಡಿದರು.

ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಪ್ರೊ. ಸುರೇಶ ಕುನ್ನೂರ್, ಪಾರಸಮಲ್ ಜೈನ್, ಮಹೇಂದ್ರ ಸಿಂಘಿ, ಶೇಖಣ್ಣ ಬೆಂಡಿಗೇರಿ, ರಮೇಶ್ ಭರಮಗೌಡ, ಡಾ. ಎಸ್.ವಿ. ಹಿರೇಮಠ, ನೇಹಾ ಮುಲ್ಲಾ ಮುಂತಾದವರು ಮಾತನಾಡಿ, ಮತದಾರರ ನೋಂದಣಿ ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.

ಡಾ. ಹುದ್ದಾರ ಕಾರ್ಯಕ್ರಮ ನಿರ್ವಹಿಸಿದರು. ಡಾ. ಬಿ.ಎಲ್. ಪಾಟೀಲ ವಂದಿಸಿದರು. ರಮೇಶ ಯಾದವಾಡ ಸಭೆ ಸಂಚಾಲಕತ್ವ ವಹಿಸಿದ್ದರು.