ಉಡುಪಿ: ರಾಜ್ಯ ಸರ್ಕಾರ ಮ್ಯಾನೇಜ್ಮೆಂಟ್ ಲಾಬಿಗೆ ಮಣಿದು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಮಾನ್ಯತೆ ಮಾನದಂಡದಲ್ಲಿ ಹಲವು ಬದಲಾವಣೆ ತಂದಿದ್ದು, ಅಲ್ಪಸಂಖ್ಯಾತ ಸಮುದಾಯದ ಆಡಳಿತ ಮಂಡಳಿ ಇದ್ದರೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಮಾನ್ಯತೆ ನೀಡಲು ಹೊರಡಿದೆ. ಇದರಿಂದ ದಲಿತ ಹಾಗೂ ಹಿಂದುಳಿದ ವರ್ಗದವರು ಉದ್ಯೋಗ ಮೀಸಲಾತಿಯಿಂದ ವಂಚಿತರಾಗಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಆರೋಪಿಸಿದ್ದಾರೆ.
ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಮಕ್ಕಳ ಆಧಾರಿತ ಆಗಿರಬೇಕೇ ಹೊರತು ಆಡಳಿತ ಮಂಡಳಿ ಆಧಾರಿತವಾಗಿರಬಾರದು. ಹಿಂದೆ ಬಿಜೆಪಿ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಅಲ್ಪಸಂಖ್ಯಾತರ ಶಾಲೆಗಳಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಅದೇ ಸಮುದಾಯದವರಿದ್ದಾಗ ಮಾತ್ರ ಅಲ್ಪಸಂಖ್ಯಾತ ಸಂಸ್ಥೆಯ ಅರ್ಹತೆ ಪಡೆಯಬಹುದಿತ್ತು. ಕಾಂಗ್ರೆಸ್ ಅಧಿಕಾರದಲ್ಲಿ ಶಿಕ್ಷಣ ಮಂತ್ರಿ ತನ್ವೀರ್ ಸೇಠ್ ಇದನ್ನು ಶೇ.50ಕ್ಕೆ ಇಳಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಶೂನ್ಯಕ್ಕೆ ಇಳಿಸಿರುವುದು ಸರಿಯಲ್ಲ. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಹಲವು ವಿನಾಯತಿಗಳಿವೆ. ಬಡಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಸರ್ಕಾರ ತತ್ಕ್ಷಣವೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಗದಗಿನ ಪಂಚಾಯತ್ ಮತ್ತು ಗ್ರಾಮೀಣಭಿವೃದ್ದಿ ವಿಶ್ವವಿದ್ಯಾಲಯದ ಕುಲಪತಿ ಅಧಿಕಾರವನ್ನು ರಾಜ್ಯಪಾಲರಿಂದ ಕಿತ್ತುಕೊಂಡು, ಮುಖ್ಯಮಂತ್ರಿಗಳಿಗೆ ನೀಡುವ ಹುನ್ನಾರ ನಡೆಸುತ್ತಿದೆ. ಇದರಿಂದ ವಿವಿಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬೆಳಗಾವಿ ಅಧಿವೇಶನದಲ್ಲಿ ಈ ತಿದ್ದುಪಡಿಗೆ ಅವಕಾಶ ನೀಡಬಾರದು ಎಂದರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇದಿಕೆಯಲ್ಲಿ ತನಗೆ ಕುರ್ಚಿ ನೀಡಲಿಲ್ಲ ಎಂದು ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದಿರುವ ಯಾಸೀರ್ ಅಹಮ್ಮದ್ ಖಾನ್ ಪಠಾಣ್ ಅವರು, ಉಪ ಕುಲಪತಿಗೆ ಗೂಂಡಾಗಿರಿ ನಡೆಸಿ ಬೆದರಿಕೆ ಒಡ್ಡಿದ್ದಾರೆ. ತಪ್ಪಿಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದವರು ಆಗ್ರಹಿಸಿದರು.
ಸಾರ್ವಜನಿಕ ಕಂಪೆನಿಗಳ ಹಣ ವರ್ಗಾವಣೆಗೆ ಯತ್ನ
ರಾಜ್ಯದ ಸಾರ್ವಜನಿಕ ರಂಗದ 167 ಸಂಸ್ಥೆಗಳಲ್ಲಿ 19 ಸಂಸ್ಥೆಗಳು ಲಾಭದಲ್ಲಿದ್ದು, ಈ ಕಂಪೆನಿಗಳ ನೌಕರರ ಶ್ರೇಯೋಭಿವೃದ್ಧಿಗೆ ಮೀಸಲಾಗಿರುವ 59 ಸಾವಿರ ಕೋಟಿ ರೂ. ಹಣವನ್ನು ನಷ್ಟದಲ್ಲಿರುವ ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದು ಕಂಪೆನಿ ಕಾಯ್ದೆಗೆ ವಿರುದ್ಧ್ದವಾಗಿದ್ದು, ಒಂದು ಕಂಪೆನಿ ಲಾಭವನ್ನು ಇನ್ನೊಂದು ಕಂಪೆನಿಗೆ ವರ್ಗಾಯಿಸುವಂತಿಲ್ಲ. ಪಿಎಸ್ಯು ಕಂಪೆನಿಗಳ ಸ್ಥಿತಿಗತಿ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಜಿ.ಪ್ರ.ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.