ಜಿಲ್ಲೆ

ಅಭಿವೃದ್ಧಿ ಕಾಮಗಾರಿಗೆ ಅಡ್ಡಿಪಡಿಸಿಲ್ಲ : ಪ್ರಮಾಣ ಮಾಡಲು ಸಿದ್ಧ ಎಂದು ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಸವಾಲು

Kolar

ಶ್ರೀನಿವಾಸಪುರ : ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ನಾನು ಅಡ್ಡಿಪಡಿಸಿಲ್ಲ. ಈ ವಿಚಾರವಾಗಿ ಪ್ರಮಾಣ ಮಾಡಲು ಯಾವುದೇ ದೇವಸ್ಥಾನದ ಅವಶ್ಯಕತೆ ಇಲ್ಲ. ಶ್ರೀನಿವಾಸಪುರ ಬಸ್ ನಿಲ್ದಾಣವೇ ಸಾಕು ಜನರೇ ನನಗೆ ದೇವರು. ಅವರ ಮುಂದೆಯೇ ಪ್ರಮಾಣ ಮಾಡುತ್ತೇನೆ ಎಂದು ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹಾಲಿ ಶಾಸಕ ರಮೇಶ್ ಕುಮಾರ್‌ಗೆ ಸವಾಲು ಹಾಕಿದರು.

ರಮೇಶ್ ಕುಮಾರ್ ಕ್ಷೇತ್ರದಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ನಾನು ಅಡ್ಡಿಪಡಿಸುತ್ತಿದ್ದೇನೆ ಎಂದು ಹತಾಶೆಗೊಂಡು ನನ್ನ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಸೋಮಯಾಜಲಪಲ್ಲಿ ಗ್ರಾಮದಲ್ಲಿ ನನ್ನ ಪಕ್ಷದ ಬೆಂಬಲದಿಂದ ಗೆದ್ದಿರುವ ಅಭ್ಯರ್ಥಿಗಳು ಗಳಿಸಿರುವ ಮತಗಳನ್ನು ನೋಡಿ ಹತಾಶೆಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯ ನೋಡಿ ಮತ ನೀಡದೆ ಅಭಿವೃದ್ಧಿ ನಡೆಸದೆ ಇರುವವರನ್ನು ನೋಡಿ ಮತದಾರರು ಮತ ನೀಡಿದ್ದಾರೆ ಎಂದು ಮತದಾರರನ್ನು ಹೀಯಾಳಿಸಿ ಮಾತನಾಡಿದ್ದಾರೆ. ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಜನರಿಗೆ ಬಿಟ್ಟಿದ್ದು ಮತದಾರರಲ್ಲಿ ಮೌಲ್ಯಗಳು ಕುಸಿದಿವೆ ಎಂದು ಮಾತನಾಡಿದ್ದಾರೆ. ಯಾರಲ್ಲಿ ಮೌಲ್ಯಗಳು ಕುಸಿದಿದೆ ಎಂಬುದು ಅವರೇ ಅರ್ಥ ಮಾಡಿಕೊಳ್ಳಲಿ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಶಾಸಕರಾಗಿ ಆಯ್ಕೆಯಾಗಿ ಮೂರು ವರ್ಷ ಕಳೆದಿದ್ದರೂ ಇದುವರೆಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮಗಳ ಕಡೆ ತಿರುಗಿಯೂ ನೋಡಿಲ್ಲ ಎಂದು ಆರೋಪಿಸಿದರು. ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್, ಮಾಜಿ ಅಧ್ಯಕ್ಷ ಬಿ.ಎನ್. ಸೂರ್ಯನಾರಾಯಣ, ಸದಸ್ಯರಾದ ಬಿ.ವಿ. ರೆಡ್ಡಿ, ಅಪ್ಪೂರು ರಾಜು, ಆನಂದ್, ಹೋಳೂರು ತಾಪಂ ಸದಸ್ಯ ಗೋಪಾಲಗೌಡ, ಶಿವಪುರ ಗಣೇಶ್, ಪೂಲುಶಿವಾರೆಡ್ಡಿ, ಸತ್ಯನಾರಾಯಣ, ಬಾಬು ಇತರರಿದ್ದರು.