ಹಾನಗಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಹಾನಗಲ್ಲ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಮತ್ತು ಜೀವ ಬೆದರಿಕೆ ಪ್ರಕರಣಗಳು ನಡೆಯುತ್ತಿವೆ. ಇವೆಲ್ಲವನ್ನು ಕೂಡಲೇ ನಿಲ್ಲಿಸದಿದ್ದರೆ ನಮ್ಮ ಕಾರ್ಯಕರ್ತರ ರಕ್ಷಣೆಗಾಗಿ ನಾವೆಲ್ಲರೂ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಎಚ್ಚರಿಕೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣೆ ನಂತರ ಪ್ರತಿದಿನ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆಗಳು ನಡೆಯುತ್ತಿವೆ. ಇತ್ತೀಚೆಗೆ ಕೆಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲೂ ಇಬ್ಬರ ಮೇಲೆ ಜೀವ ಬೆದರಿಕೆ ಹಾಕಲಾಗಿದೆ. ಹಾವಣಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಹವಳಣ್ಣನವರ ಅವರಿಗೆ, ಹೈಮಾಸ್ಟ್ ಬೀದಿ ದೀಪಗಳ ಕುರಿತು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದವರಿಂದ ಜೀವಬೆದರಿಕೆ ಒಡ್ಡಲಾಗಿದೆ ಎಂದರು.
ತಾಲೂಕಿನಲ್ಲಿ ಕಾಂಗ್ರೆಸ್ ಆಡಳಿತವಿರುವ ಗ್ರಾಪಂಗಳಲ್ಲಿ ಮಾತ್ರ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು, ದಬ್ಬಾಳಿಕೆ ನಡೆಸಲಾಗುತ್ತಿದೆ. ಭೀಕರ ಬರಗಾಲವಿದ್ದರೂ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆಗೊಳಿಸದೇ, ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತವಿದ್ದಾಗ ಕೇಂದ್ರದ ಪರಿಹಾರ ಬರುವ ಮುನ್ನವೇ ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಬಿಡುಗಡೆಗೊಳಿಸಿತ್ತು ಎಂದರು.
ರೈತರ ಪಂಪ್ಸೆಟ್ಗಳಿಗೆ ಗುಣಮಟ್ಟದ ವಿದ್ಯುತ್ ವಿತರಿಸಲಾಗುತ್ತಿಲ್ಲ. ಟಿಸಿಗಳು ಸುಟ್ಟರೂ ಪೂರೈಸುತ್ತಿಲ್ಲ. ಸರ್ಕಾರಕ್ಕೆ ರೈತಪರ ಕಾಳಜಿಯಿಲ್ಲ. ಜಲಜೀವನ್ ಮಿಶನ್ ಅಡಿ ಸರ್ಕಾರಕ್ಕೆ ಗ್ರಾಪಂಗಳು ಸಲ್ಲಿಸಿದ್ದ ಠೇವಣಿ ಹಣವನ್ನು ಅವರಿಗೆ ಮರಳಿಸುತ್ತಿಲ್ಲ. ಈ ಠೇವಣಿಯನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಸಜ್ಜನರ ಆರೋಪಿಸಿದರು.
ಹಾವಣಗಿ ಗ್ರಾಪಂ ಅಧ್ಯಕ್ಷ ಆನಂದ ಹವಳಣ್ಣನವರ ಮಾತನಾಡಿ, ಗ್ರಾಮ ಪಂಚಾಯತ್ಗಳು ವಿದ್ಯುತ್ ಬಿಲ್ ಕಟ್ಟಲು ಹೆಣಗಾಡುತ್ತಿರುವಾಗ ಇಲ್ಲಿನ ಶಾಸಕರು ಕಾಂಗ್ರೆಸ್ ಆಡಳಿತವಿರುವ ಗ್ರಾಪಂಗಳಲ್ಲಿ ಹೈಮಾಸ್ಟ್ ವಿದ್ಯುದ್ದೀಪದ ಕಂಬಗಳನ್ನು ಹಾಕಲು ಸೂಚಿಸಿದ್ದಾರೆ. 15ನೇ ಹಣಕಾಸು ಯೋಜನೆಯಡಿ ಈ ಹೈಮಾಸ್ಟ್ ದೀಪಗಳನ್ನು ಹಾಕುತ್ತಿರುವ ಬಗ್ಗೆ ತಿಳಿದುಬಂದಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಜೀವಬೆದರಿಕೆ ಒಡ್ಡಲಾಗುತ್ತಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಭೋಜರಾಜ ಕರೂದಿ, ಜಿಪಂ ಮಾಜಿ ಸದಸ್ಯರಾದ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ಮಾಲತೇಶ ಸೊಪ್ಪಿನ, ಪದಾಧಿಕಾರಿಗಳಾದ ಶಿವಲಿಂಗಪ್ಪ ತಲ್ಲೂರ, ಮಹೇಶ ಕಮಡೊಳ್ಳಿ, ನಿಜಲಿಂಗಪ್ಪ ಮುದಿಯಪ್ಪನವರ, ಡಾ.ಸುನೀಲ ಹಿರೇಮಠ ಇದ್ದರು.