ಜಿಲ್ಲೆ

ನೆರೆ ಪೀಡಿತ ಪ್ರದೇಶಗಳಿಗೆ ರೂಪಾಲಿ ನಾಯ್ಕ ಭೇಟಿ

Uttara Kannada - Subash Hegde

ಕಾರವಾರ: ತಾಲೂಕಿನ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಕಿ ರೂಪಾಲಿ ಎಸ್.ನಾಯ್ಕ, ಸಂತ್ರಸ್ತರ ಸಹಾಯಕ್ಕೆ ನಿಂತರು. ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಲು ನೌಕಾನೆಲೆ ಅಧಿಕಾರಿಗಳಿಗೆ ತಾಕೀತು ಪಡಿಸಿದರು.
ಕಾರವಾರ ತಾಲೂಕಿನ ಚೆಂಡಿಯಾ‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಗಾ, ಐಸ್‌‌ಫ್ಯಾಕ್ಟರಿ ಚೆಂಡಿಯಾ, ಪೋಸ್ಟ್‌ ಚೆಂಡಿಯಾ, ಇಡೂರು ಸೇರಿದಂತೆ‌ ವಿವಿಧ ಭಾಗದ ಜಲಾವೃತವಾಗಿ ತೊಂದರೆಗೊಳಗಾದ ಜನತೆಯ ಅಹವಾಲನ್ನು ಆಲಿಸಿದರು. ಜನತೆಯೊಂದಿಗೆ ತಾವಿರುವುದಾಗಿ ಭರವಸೆ ನೀಡಿದರು.
ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ಕಂಪನಿಯು ಅವೈಜ್ಞಾನಿಕ ಕಾಮಗಾರಿ ಹಾಗೂ ನೌಕಾನೆಲೆ ಕಾಮಗಾರಿಗಳಿಂದ ಸಮುದ್ರಕ್ಕೆ ಸೇರುವ ನೀರಿಗೆ ತಡೆಯಾಗುತ್ತಿರುವುದರಿಂದ ಇಂತಹ ಸಮಸ್ಯೆಗಳು ಮರುಕಳಿಸುತ್ತಿದೆ ಎಂದು ತಿಳಿಸಿದ ರೂಪಾಲಿ ಎಸ್.ನಾಯ್ಕ, ನೌಕಾನೆಲೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಈ ಹಿಂದೆ ಶಾಸಕಳಾಗಿರುವಾಗಲೂ ನೀರು ಹರಿದುಹೋಗಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ಆದರೆ ಅಗತ್ಯ ಕ್ರಮ ಕೈಗೊಳ್ಳದೆ ಇರುವುದರಿಂದ ಎಲ್ಲೆಡೆ ನೀರು ತುಂಬುತ್ತಿದೆ. ಜನತೆ ಮೇಲಿಂದ ಮೇಲೆ ತೊಂದರೆ ಅನುಭವಿಸುವಂತಾಗಿದೆ. ಇಲ್ಲಿನ ಜನತೆ ನೌಕಾನೆಲೆಗಾಗಿ, ರಾಷ್ಟ್ರಕ್ಕಾಗಿ ಮನೆ, ಆಸ್ತಿ ಪಾಸ್ತಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ನೌಕಾನೆಲೆ ಸಹಕರಿಸದೆ ಇದ್ದರೆ ಹೇಗೆ. ನೀರು ತುಂಬದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನೀರು ಸರಾಗವಾಗಿ ಹರಿದುಹೋಗಲು ಇರುವ ಅಡ್ಡಿಯನ್ನು ನಿವಾರಿಸಿ ಶಾಶ್ವತ ಕ್ರಮಕೈಗೊಳ್ಳುವಂತೆ ನೌಕಾನೆಲೆ ಅಧಿಕಾರಿಗಳಿಗೆ ತಾಕೀತು ಪಡಿಸಿದರು. ನಂತರ ನೀರು ಹರಿದು ಹೋಗಲು ತಡೆಯಾಗುತ್ತಿದ್ದ ಜಾಗಗಳನ್ನು ನೌಕಾನೆಲೆ ಅಧಿಕಾರಿಗಳಿಗೆ ತಿಳಿಸಲಾಯಿತು. ನೀರಿನ ಹರಿವಿಗೆ ಆಗಿರುವ ಅಡ್ಡಿಯನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದರು.

ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ರೂಪಾಲಿ ಎಸ್.ನಾಯ್ಕ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿದರು. ರಸ್ತೆಯಲ್ಲಿ ನೆಲೆಸಿದ್ದ ನೀರಿನಲ್ಲಿಯೇ ನಡೆದುಕೊಂಡು ಹೋಗಿ ಸಂತ್ರಸ್ತರ ಅಹವಾಲು ಆಲಿಸಿದರು. ಅವರಿಗೆ ಧೈರ್ಯ ಹೇಳಿದರು. ನಿಮ್ಮ ಜೊತೆ ತಾವಿದ್ದು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ಹೇಳಿದರು. ರೂಪಾಲಿ ಎಸ್.ನಾಯ್ಕ ಸ್ಥಳಕ್ಕೆ ಆಗಮಿಸಿ ಭರವಸೆ ತುಂಬಿ, ನಮ್ಮೊಡನೆ ನಿಂತಿರುವುದರಿಂದ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾರವಾರ ತಾಲೂಕಿನ ಚೆಂಡಿಯಾ, ಅರಗಾ, ತೋಡೂರ ಮತ್ತಿತರ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರದಂತೆ ಶಾಶ್ವತ ಪರಿಹಾರ ಕಲ್ಪಿಸಲು ನಾನು ಈಗಾಗಲೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆ ಮಾತುಕತೆ ನಡೆಸಿ, ವಿನಂತಿಸಿದ್ದೇನೆ. ಸಂಸದರು ಸ್ಪಂದಿಸಿದ್ದು, ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ ಎಂದು ರೂಪಾಲಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ನಾನು ಶಾಸಕಳಾಗಿದ್ದಾಗ ಪ್ರವಾಹ ಬಂದಾಗ ಸಮಸ್ಯೆಯನ್ನು ನೌಕಾನೆಲೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ನೌಕಾನೆಲೆಯೊಳಗೆ ಅಧಿಕಾರಿಗಳೊಂದಿಗೆ ತೆರಳಿ ನೀರಿನ ಹರಿವಿಗೆ ಅಡ್ಡಿಯಾದ ಜಾಗಗಳನ್ನು ಗುರುತಿಸಲಾಗಿತ್ತು. ಅವುಗಳನ್ನು ತೆರವು ಮಾಡಿದರೆ ನೀರು ಸರಾಗವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿತ್ತು. ಆದರೆ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದು ಪುನರಾವರ್ತನೆ ಆಗದಂತೆ ಕಾರ್ಯ ನಿರ್ವಹಿಸಬೇಕು ಎಂದು ನೌಕಾನೆಲೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾ ಆಡಳಿತ ಮತ್ತು ನೌಕಾನೆಲೆ ಜನರ ರಕ್ಷಣೆಗೆ ಆದ್ಯತೆ ನೀಡಬೇಕು. ಪ್ರವಾಹ ಉಂಟಾಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು.ರೂಪಾಲಿ ಎಸ್.ನಾಯ್ಕ ರಾಜ್ಯ ಉಪಾಧ್ಯಕ್ಷೆ ಬಿಜೆಪಿ, ಮಾಜಿ ಶಾಸಕಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ.