ಜಿಲ್ಲೆ

ಕಾರ್ಯಕರ್ತರ ಧ್ವನಿಯಾಗಿ ಸಾಮಾಜಿಕ ಕೆಲಸ: ರಘುಪತಿ ಭಟ್​

ಉಡುಪಿ: ನೈಋತ್ಯ ಪದವೀಧರ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸವಿತ್ತು. ಆದರೆ ಮತದಾರರ ರ್ನಿಣಯ ಸ್ವೀಕರಿಸಿದ್ದೇವೆ. ನಮ್ಮ ಸಾತ್ವಿಕ ಹೋರಾಟಕ್ಕೆ ಅನೇಕ ಮಂದಿ ಬೆಂಬಲ ನೀಡಿದ್ದು, ಸೋಲಿನಿಂದ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮುಂದುವರಿಸುತ್ತೇನೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್​ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಪಿ. ಚುನಾವಣೆ ರೀತಿಯಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರು, ಆರ್​. ಎಸ್​.ಎಸ್​ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡು ಪ್ರಚಾರಕ್ಕೆ ಇಳಿದಿದ್ದರು. ಹೀಗಾಗಿ ಕೊನೆಕ್ಷಣದಲ್ಲಿ ನಮಗೆ ಹಿನ್ನಡೆಯಾಗಿದೆ. ಪಕ್ಷ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾಯಕರನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದೇನೆ. ನಮ್ಮ ಸ್ಪರ್ಧೆಯಿಂದ ಸಿಟಿ ರವಿ ಅವರಿಗೆ ನ್ಯಾಯ ಸಿಕ್ಕಿದೆ ಎಂಬ ಸಮಾಧಾನವಿದೆ. ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಒಂದು ವಾರದ ಬಳಿಕ ಉಡುಪಿ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿದ್ದೇನೆ. ಕಾರ್ಯಕರ್ತನ ನೆಲೆಯಲ್ಲಿ ಕೆಲಸ ಮಾಡುತ್ತೇನೆ. ರಾಜಕೀಯದಿಂದ ವಿಮುಖನಾಗುವುದಿಲ್ಲ ಎಂದರು.

ಹಣವಂತರಿಗೆ ಪದವೀಧರ ಕ್ಷೇತ್ರ ಮೀಸಲು
ಈ ಬಾರಿ ನಡೆದ ಪದವೀಧರ ಕ್ಷೇತ್ರದ ಚುನಾವಣೆಯನ್ನು ಬಿಜೆಪಿ ನಡೆಸಿದ ರೀತಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ದುಡ್ಡು ಇದ್ದವರು ಮಾತ್ರ ಸ್ಪರ್ಧಿಸಬಹುದು ಎಂಬ ಭಾವನೆ ವ್ಯಕ್ತವಾಗಿದೆ. ಪಕ್ಷದಲ್ಲಿ ಅವಕಾಶ ವಂಚಿತರಿಗೆ ಇನ್ನು ಈ ಸ್ಥಾನ ಸಿಗುವುದು ಸುಲಭವಲ್ಲ ಎಂದರು.

6 ವರ್ಷಕ್ಕೊಮ್ಮೆ ಹೊಸದಾಗಿ ನೋಂದಣಿ ಸರಿಯಲ್ಲ
ಪದವೀಧರ ಕ್ಷೇತ್ರಕ್ಕೆ ಹೆಚ್ಚಿನ ಮತದಾರರ ನೋಂದಣಿ ಮಾಡಿಕೊಂಡಿಲ್ಲ. 6 ವರ್ಷಕ್ಕೊಮ್ಮೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವ ನಿಯಮ ಬದಲಾಯಿಸಬೇಕು. 25 ಲಕ್ಷ ಜನ ಪದವೀಧರರ ಪ್ರತಿನಿಧಿಯನ್ನು 66,000 ಜನ ಆಯ್ಕೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಉತ್ತಮ ಬೆಳವಣಿಗೆಯಲ್ಲ. ನಿಯಮ ಬದಲಾವಣೆಗೆ ಇದು ಸಕಾಲವಾಗಿದ್ದು, ಸರ್ಕಾರ ಮತ್ತು ಚುನಾವಣಾ ಆಯೋಗ ಪದವಿ ಪಡೆದ ಅಭ್ಯರ್ಥಿಗಳಿಗೆ ವಿವಿ ಮಟ್ಟದಲ್ಲೇ ನೋಂದಾಯಿಸಿಕೊಳ್ಳುವಂತಹ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಹಿರಿಯ ಮುಖಂಡರಾದ ಶಿವರಾಮ ಉಡುಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್​, ಮಾಜಿ ಸದಸ್ಯ ಜರಾಲ್ಡ್​ ಫೆರ್ನಾಂಡಿಸ್​, ಪ್ರಮುಖರಾದ ರೋಷನ್​ ಶೆಟ್ಟಿ, ಮಹೇಶ್​ ಠಾಕೂರ್​ ಉಪಸ್ಥಿತರಿದ್ದರು.