ಬೆಂಗಳೂರು: ಸಂಬಂಧಪಟ್ಟ ವಿಚಾರವಾಗಿ ಸೂಕ್ತ ಉತ್ತರ ಕೊಡಿ ಎಂದರೂ ಸರ್ಕಾರಿ ಅಧಿಕಾರಿಗಳು ಜನಸಾಮಾನ್ಯರಿಗೆ ಪ್ರತಿಕ್ರಿಯಿಸದೆ ಸತಾಯಿಸುವುದು ಹೊಸದೇನಲ್ಲ. ಆದರೆ ಇಲ್ಲಿ ಕೆಲವು ಅಧಿಕಾರಿಗಳು ಜನಪ್ರತಿನಿಧಿಯೇ ಪ್ರಶ್ನೆ ಮಾಡಿದರೂ ಪ್ರತಿಕ್ರಿಯಿಸದೇ ನಿರ್ಲಕ್ಷ್ಯ ತೋರಿದ್ದಾರೆ.
2021ರ ಫೆಬ್ರವರಿ ಮಾಹೆಯಲ್ಲಿ ನಡೆದಿರುವ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನ ಕುರಿತು ಯಾವುದೇ ಮಾಹಿತಿ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿಲ್ಲ. ಮೌಲ್ಯಮಾಪನದ ಪ್ರಕ್ರಿಯೆ ಈವರೆಗೂ ಪ್ರಾರಂಭವಾಗಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಕೆಪಿಎಸ್ಸಿಯನ್ನು ಮಾಜಿ ಸಚಿವ ಎಸ್.ಸುರೇಶ್ಕುಮಾರ್ ಕೇಳಿದ್ದರು.
ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದು ಈ ಯುವಕರು ಭರವಸೆ ಕಳೆದುಕೊಳ್ಳುವ ಮುನ್ನ ಮೌಲ್ಯಮಾಪನ ಕುರಿತು ಮಾಹಿತಿ ನೀಡಿ ಎಂದು ಕೇಳಿದ್ದೇನೆ. ಆದರೆ ಈವರೆಗೂ ಯಾವುದೇ ಮಾಹಿತಿ ನನಗಾಗಲೀ ಅಥವಾ ಅಭ್ಯರ್ಥಿಗಳಿಗಾಗಲೀ ಲಭ್ಯವಾಗಿರುವುದಿಲ್ಲ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಾದ ಮಾಹಿತಿ ಪಡೆಯಲು ನಾನು ಮೇ 31ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಕರ್ನಾಟಕ ಲೋಕ ಸೇವಾ ಆಯೋಗದ ಮುಖ್ಯ ದ್ವಾರದ ಮುಂದೆ ನಿಲ್ಲುವವನಿದ್ದೇನೆ. ಆಗಲಾದರೂ ಕೆಪಿಎಸ್ಸಿ ಅಧಿಕಾರಿಗಳು 2021ರ ಫೆಬ್ರವರಿ ಮಾಹೆಯಲ್ಲಿ ನಡೆದಿರುವ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನದ ಪ್ರಸ್ತುತ ಹಂತದ ಕುರಿತು ಮಾಹಿತಿ ನೀಡುತ್ತಾರೆಂದು ಆಶಿಸುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಒಬ್ಬ ಜನಪ್ರತಿನಿಧಿಗೇ ಸರ್ಕಾರಿ ಅಧಿಕಾರಿಗಳು ಈ ತೆರನಾಗಿ ನಡೆದುಕೊಂಡರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಸಾರ್ವಜನಿಕರೂ ಕೆಪಿಎಸ್ಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.