ಜಿಲ್ಲೆ

ಎಡೆಯೂರು ಸಿದ್ದಲಿಂಗೇಶ್ವರ ಸನ್ನಿಧಿಯಲ್ಲಿ ಬಿಎಸ್​ವೈ ಕುಟುಂಬ ಪರ ರೇಣುಕಾಚಾರ್ಯ ಸಂಕಲ್ಪ

ಕುಣಿಗಲ್​: ರಾಜ್ಯ ಬಿಜೆಪಿ ಗುಂಪುಗಾರಿಕೆಯಿಂದ ಪಕ್ಷಕ್ಕಾಗುತ್ತಿರುವ ಹಾನಿ ತಪ್ಪಿಸಬೇಕು ಎಂದು ಬಿಜೆಪಿ ವರಿಷ್ಠರಿಗೆ ದೂರು ನೀಡಿರುವ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದ ತಂಡ ಮಂಗಳವಾರ ಎಡೆಯೂರು ಶ್ರೀಸಿದ್ಧಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಬಿಎಸ್​ವೈ ಕುಟುಂಬದ ಮೇಲೆ ಬಿದ್ದಿರುವ ವಕ್ರದೃಷ್ಠಿ ಪರಿಹಾರಕ್ಕೆ ಪ್ರಾರ್ಥಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆದೇವರು ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ನಾಡಿನ ಸಮಸ್ತ ಜನರಿಗೆ ಒಳ್ಳೆದಾಗಲಿ ಎಂದು, ಯಡಿಯೂರಪ್ಪ ಕುಟುಂಬದ ಮೇಲೆ ದುಷ್ಟಶಕ್ತಿಯ ದೃಷ್ಟಿ ಬೀಳಬಾರದು ಎಂದು ಪೂಜೆ ಸಲ್ಲಿಸಿದ್ದೇವೆ ಎಂದರು.

ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನರೇಂದ್ರಮೋದಿ ಅವರಿಗೆ ಒಳ್ಳೆದಾಗಲಿ ಎಂದೂ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದಲ್ಲಿ ವಿಶೇಷ ಮಾಸ್​ ಲೀಡರ್​ ಯಡಿಯೂರಪ್ಪ, ಜ್ಯಾತ್ಯಾತಿತಿ ನಾಯಕ, ಅವರ ಕುಟುಂಬಕ್ಕೆ ಒಳ್ಳೆದಾಗಲಿ ಎಂದು ಅವರ ಮನೆ ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಯಡಿಯೂರಪ್ಪ ಅವರು ಸೈಕಲ್​ ತುಳಿದು ಪಕ್ಷ ಕಟ್ಟಿದವರು, ಬಿಎಸ್​ವೈ ಜತೆಯಲ್ಲಿಯೇ ತುಮಕೂರಿನ ಎಸ್​.ಮಲ್ಲಿಕಾರ್ಜುನಯ್ಯ, ಡಿ.ಎಚ್​.ಶಂಕರಮೂರ್ತಿ ಅವರಂತಹ ನಾಯಕರ ಪರಿಶ್ರಮದಿಂದ ಪಕ್ಷ ಈ ಮಟ್ಟಕ್ಕೆ ಬೆಳೆದಿದೆ, ಯಡಿಯೂರಪ್ಪ ರಾಜ್ಯಾಧ್ಯಕ್ಷರಾದಾಗ ಅವರಿಗೆ 45 ವರ್ಷ, ಬಿ.ವೈ.ವಿಜಯೇಂದ್ರ ಅವರಿಗೆ ಈಗ 49 ವರ್ಷ ಯಡಿಯೂರಪ್ಪನವರು ವಿಜಯೇಂದ್ರಗಿಂತ ಚಿಕ್ಕ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷರಾಗಿದ್ದಾರೆ ಆಗಿದ್ದರೂ ವಿಜಯೇಂದ್ರ ಕಿರಿಯ ಹೇಗಾಗುತ್ತಾರೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರ ಸಂಘರ್ಷ ಹಾಗೂ ಸಂಘಟನೆಯಿಂದ ಪಕ್ಷ ಬೆಳೆದಿದೆ, ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ 2028ರ ಚುನಾವಣೆ ಗೆ ಹೋಗುತ್ತೇವೆ, 140 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ. ಸೋಮವಾರದ ಸಭೆಯಲ್ಲಿ 21 ಜಿಲ್ಲಾಧ್ಯಕ್ಷರು ವಿಜಯೇಂದ್ರಗೆ ಬೆಂಬಲ ಕೊಟ್ಟಿದ್ದಾರೆ. ಸ್ವಯಂ ಘೋಷಿತ ನಾಯಕರಿಂದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​ಗೆ ಟಾಂಗ್​ ಕೊಟ್ಟ ರೇಣುಕಾಚಾರ್ಯ, ಫೇಕ್​ ನೋಟೀಸ್​ ಎಂದು ಹೇಳುವುದು ಏನು? ಯಡಿಯೂರಪ್ಪ ಕಣ್ಣೀರು ಹಾಕಿದ್ದನ್ನು ಅಭಿನಯಿಸುತ್ತಾರೆ, ನಮ್ಮೆಲ್ಲರ ನಾಯಕ ಯಡಿಯೂರಪ್ಪ ತಮಗಾಗಿ ಕಣ್ಣೀರು ಹಾಕಿಲ್ಲ ಎಂದು ಹರಿಹಾಯ್ದರು.

ಕುಮಾರ್​ ಬಂಗಾರಪ್ಪನವರೇ ನಿಮಗೆ ರಾಜಕೀಯ ಪುನರ್​ ಜನ್ಮ ಕೊಟ್ಟಿದ್ದು ಯಡಿಯೂರಪ್ಪ, ಮೊನ್ನೆ ಮೊನ್ನೆ ಬಂದವರು ವಿಜಯೇಂದ್ರಗೆ ನೀತಿ ಪಾಠ ಹೇಳುತ್ತಾರೆ.ರಮೇಶ ಜಾರಕಿಹೊಳಿ ಬಲಿಪಶು ಆಗಬೇಡಿ. ನೀವು ನನ್ನ ಸ್ನೇಹಿತರು. ಡಿಸೆಂಬರ್​ 10 ರಂದು ದಾವಣಗೆರೆ ಸಮಾವೇಶ ಆಯೋಜಿಸಿದ್ದು ಈ ಸಮಾವೇಶದಲ್ಲಿ ಮಾಜಿ ಶಾಸಕರುಗಳು, ಮಾಜಿ ಸಚಿವರು ಭಾಗವಹಿಸುತ್ತಾರೆ. ಆರ್​.ಅಶೋಕ್​, ಕೇಂದ್ರ ಸಚಿವರಿಗೂ ಆಹ್ವಾನ ನೀಡಿದ್ದೇವೆ ಎಂದರು.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಯತ್ನಾಳ್​ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ದೇವಸ್ಥಾನದ ಮುಂದೆ ಧಿಕ್ಕಾರ ಕೂಗಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮರಿಸ್ವಾಮಿ, ಟಿ.ಆರ್​.ಸದಾಶಿವಯ್ಯ ಮತ್ತಿತರರು ಇದ್ದರು.