ಜಿಲ್ಲೆ

ಬಿಳಿ ಶರ್ಟು ತೊಟ್ಟು ಓಡಾಡೋ ಆಸೆ ಇಲ್ಲ

ಕೋಲಾರ ಡೆಸ್ಕ್

ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅನಿಸಿಕೆ, ಚುನಾವಣೆಗೆ ಸ್ಪರ್ಧಿಸುವ ಇಂಗಿತ ಸದ್ಯಕ್ಕಿಲ್ಲ

ಕೋಲಾರ: ಚುನಾವಣೆಯಲ್ಲಿ ಸೋತಿರುವ ಬಗ್ಗೆ ನನಗೆ ಬೇಸರವಿಲ್ಲ. ನನ್ನೊಂದಿಗೆ ಇದ್ದು, ಬೆನ್ನಿಗೆ ಚೂರಿ ಹಾಕಿದವರಿಂದ ಸೋತಿದ್ದೇನೆ. ಸೋಲಿನ ಬಗ್ಗೆ ಪ್ರಶ್ನಿಸುವುದಿಲ್ಲ. ಅದು ಜನರ ತೀರ್ಪು ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅಭಿಪ್ರಾಯಪಟ್ಟರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ದಿ.ವೆಂಕಟಮುನಿಯಪ್ಪ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿ, ಮತ್ತೆ ಚುನಾವಣೆಗೆ ನಿಲ್ಲಬೇಕೆಂದರೆ ಬಿಳಿ ಶರ್ಟು ಹಾಕಿಕೊಂಡು ಓಡಾಡಬೇಕು. ಮದುವೆ, ಮುಂಜಿ, ರಥೋತ್ಸವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬೇಕು. ಆದರೆ ಅಂತಹ ಆಸೆ ನನ್ನಲ್ಲಿ ಸದ್ಯಕ್ಕೆ ಇಲ್ಲ ಎಂದರು.

ನಮಗಾಗಿ ದುಡಿದವರಿಗೆ, ನನಗೆ ಹೆಗಲು ಕೊಟ್ಟವರಿಗೆ, ನನ್ನ ನಂಬಿದವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದ ಅವರು, ವಿಶೇಷವಾಗಿ ಅನ್ನದಲ್ಲಿ ವಿಷ ಹಾಕಿದವರಿಗೆ, ಭುಜದ ಮೇಲೆ ಕೈಹಾಕಿ ಬೆನ್ನಹಿಂದೆ ತಿವಿದು, ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರು ಚೆನ್ನಾಗಿರಲಿ ಎಂದು ಪರೋಕ್ಷವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈಕೊಟ್ಟವರ ವಿರುದ್ಧ ಹರಿಹಾಯ್ದರು.

ಜನರಿಗೆ ಇಷ್ಟವಾಗದ ಕೆಸಿ ವ್ಯಾಲಿ: ಜಿಲ್ಲೆಯಲ್ಲಿ 2,000 ಅಡಿ ಕೊಳವೆ ಬಾವಿ ಕೊರೆದರೆ ನೀರು ಸಿಗುತ್ತಿರಲಿಲ್ಲ. ವಿಧಾನಸಭೆಯಲ್ಲಿ ಬೆಂಗಳೂರಿನಲ್ಲಿ ಬಳಸುವ ನೀರನ್ನು ಕೊಡುವಂತೆ ಮನವಿ ವಾಡಿದಾಗ ಕೆ.ಸಿ.ವ್ಯಾಲಿ ನೀರು ನೀಡಿದರು. ಇದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ನಾನು ಅಂದುಕೊಂಡಿರಲಿಲ್ಲ. ದೇಶವೇ ಯೋಜನೆಯನ್ನು ಇಷ್ಟ ಪಡುವಾಗ ಜಿಲ್ಲೆಯ ಜನತೆಗೆ ಯೋಜನೆ ಇಷ್ಟ ಇಲ್ಲ ಎನ್ನುವಂತಾಗಿದೆ ಎಂದು ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಗಾಗಿ ರೂಪಿಸಿದ ಯೋಜನೆ ಬೇರೆಯವರಿಗೆ ಲಾಭಎತ್ತಿನಹೊಳೆ ಯೋಜನೆ ಜಾರಿಗೆ ತಂದಿದ್ದು ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ. ಆದರೆ, ಅದರ ಉಪಯೋಗ ಆಗುತ್ತಿರುವುದು ಹಾಸನ ಜಿಲ್ಲೆಗೆ ಎಂದು ರಮೇಶ್‌ಕುಮಾರ್ ಬೇಸರ ವ್ಯಕ್ತಪಡಿಸಿದರು. ಎತ್ತಿನಹೊಳೆ ಯೋಜನೆ ಪೂರ್ಣಗೊಂಡು ಲೋಕಾರ್ಪಣೆ ಮಾಡಲಾಗಿದೆ. ಆದರೆ ಯೋಜನೆಯ ನೀರು ಹಾಸನ ಜಿಲ್ಲೆಯ ಅರಸೀಕೆರೆ ಸೇರಿ ಆ ಭಾಗಕ್ಕೆ ಉಪಯೋಗವಾಗುತ್ತಿದೆ. ಆದರೆ ಮೂಲ ಎತ್ತಿನಹೊಳೆ ಯೋಜನೆ ರೂಪಿಸಿದ್ದೇ ನಮಗಾಗಿ. ಆದರೆ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅದರ ಉಪಯೋಗ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದರು. ಎತ್ತಿನಹೊಳೆ ಯೋಜನೆಯ ಪ್ರಾರಂಭಕ್ಕೂ ಮುನ್ನ ಚಿಕ್ಕಬಳ್ಳಾಪುರದಲ್ಲಿ ಅಂದು ವೀರಪ್ಪಮೊಯ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಪೂಜೆ ಮಾಡಿಸಿದ್ದರು. ಅದಕ್ಕೂ ನಾನು ವಿರೋಧ ವ್ಯಕ್ತಪಡಿಸಿ ಚುನಾವಣೆ ಗಿಮ್ಮಿಕ್ಕಾಗಿ ಬೇಡ, ಅದು ಕಾರ್ಯಗತಗೊಳ್ಳಬೇಕು ಎಂದು ಹೇಳಿದ್ದೆ. ಯೋಜನೆಯಡಿ ನೀರು ಲಭ್ಯವಿದ್ದರೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತರುವಲ್ಲಿ ಇಚ್ಛಾಶಕ್ತಿ ಕೊರತೆ ಇದೆ ಅಸಮಾಧಾನ ವ್ಯಕ್ತಪಡಿಸಿದರು.