ಜಿಲ್ಲೆ

ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮಗಳ ಬಗ್ಗೆ ಅಮಿತ್ ಷಾಗೆ ದಾಖಲೆ ರವಾನೆ: ಮಾಜಿ ಶಾಸಕ ಅನಿಲ್ ಲಾಡ್ ಹೇಳಿಕೆ

ಬಳ್ಳಾರಿ : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಅಕ್ರಮಗಳ ಕುರಿತು ದಾಖಲೆ ಸಹಿತ ಮಾಹಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕಳುಹಿಸಲಾಗುವುದು ಎಂದು ಮಾಜಿ ಶಾಸಕ ಅನಿಲ್ ಲಾಡ್ ಹೇಳಿದರು.

2008ರಲ್ಲಿ ಸರ್ವೇ ನಂ. 519 ನಮ್ಮ ಮನೆಯನ್ನು ಜನಾರ್ದನ ರೆಡ್ಡಿ ಅವರ ಮಾವನ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸೋಮವಾರ ಬಳ್ಳಾರಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

1.40 ಕೋಟಿ ರೂ. ಮನೆ ಮಾರಿದ್ದು, ಈ ವರೆಗೆ ಒಂದು ನಯಾಪೈಸೆ ಬಂದಿಲ್ಲ. ಬಿಜೆಪಿ ಹೈಕಮಾಂಡ್ ಜತೆಗೆ ಈ ಹಿಂದೆ ಜನಾರ್ದನ ರೆಡ್ಡಿ ಉತ್ತಮ ಸಂಬಂಧ ಹೊಂದಿದ್ದರು. ಅದಕ್ಕಾಗಿ ಯಾರಿಗೂ ಹೇಳಿದರೂ ಪ್ರಯೋಜನವಾಗಲ್ಲ ಎಂದು ಸುಮ್ಮನ್ನಿದ್ದೆ. ಈಗ ರೆಡ್ಡಿ ಅವರ ವಿದೇಶದಲ್ಲಿರುವ ಆಸ್ತಿ ಬಗ್ಗೆ ಸಿಬಿಐ ತನಿಖೆ ಮಾಡಲು ಸೂಚಿಸಿದೆ. ಅದರ ಜತೆಗೆ ಬಳ್ಳಾರಿ ನಗರದಲ್ಲಿರುವ ಆಸ್ತಿಯ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಜನರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದ್ದಾರೆ. ಅವರು ಕೇವಲ ಪ್ರಚಾರಕ್ಕಷ್ಟೇ ಸೀಮಿತರಾಗಿದ್ದು, ಬಳ್ಳಾರಿ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ ಎಂದರು.

2013 ಹಾಗೂ 2018ರಲ್ಲಿ ಚುನಾವಣೆಗೆ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ಈ ಬಾರಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮುಟ್ಟಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ನಿರ್ದೇಶನದಂತೆ ಕ್ಷೇತ್ರದ ಜನರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಗಣಿ ಹಗರಣ ವಿಚಾರದಲ್ಲಿ 150 ಕೋಟಿ ರೂ. ಹಗರಣದ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಪ್ರಸ್ತಾಪ ಮಾಡಿದ ವಿಚಾರ ಹಿನ್ನೆಲೆ ಆ ಬಗ್ಗೆ ನೀಡಲು ನನ್ನನ್ನು ಸುದ್ದಿಗೋಷ್ಠಿ ಮಾಡುವಂತೆ ರೆಡ್ಡಿ ಅವರು ಒತ್ತಾಯಿಸಿದ್ದರು. ಅದಕ್ಕೆ ಒಪ್ಪದಿದ್ದಕ್ಕೆ ಬಿಜೆಪಿಯಿಂದ ಟಿಕೆಟ್ ತಪ್ಪಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿಗೆ ಕರೆದುಕೊಂಡು ಬಂದಿದ್ದು ನಾನು. ಆದರೆ ಇವತ್ತು ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ ಎಂದರು.