ಯಲಬುರ್ಗಾದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು. ಎಂಪಿ ಪರಾಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್, ಎಂಎಲ್ಸಿ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ತಾಲೂಕು ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಬಸಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಮಲ್ಲನಗೌಡ ಕೋನನಗೌಡ್ರ ಇದ್ದರು.  
ಜಿಲ್ಲೆ

ಕಾಂಗ್ರೆಸ್ ಅಪಪ್ರಚಾರದಿಂದ ಬಿಜೆಪಿಗೆ ಸೋಲು

ಯಲಬುರ್ಗಾ: ಕಾಂಗ್ರೆಸ್‌ನವರ ಸುಳ್ಳು ಪ್ರಚಾರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್‌ಗೆ ಸೋಲಾಯಿತು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಎಂಪಿ ಎಲೆಕ್ಷನ್‌ನಲ್ಲಿ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದರಿಂದ ಅಭ್ಯರ್ಥಿಗೆ 6 ಲಕ್ಷಕ್ಕೂ ಅಧಿಕ ಮತ ಬಂದಿವೆ. ಕಾರ್ಯಕರ್ತರ ಶಕ್ತಿಯಿಂದ ಗೆಲುವಾಗಿದ್ದು ಮತಗಳಿಂದ ಮಾತ್ರ ನಮಗೆ ಸೋಲಾಗಿದೆ. ರಾಜಕೀಯದಲ್ಲಿ ಬಸವರಾಜಗೆ ಉತ್ತಮ ಭವಿಷ್ಯವಿದೆ ಎಂದರು.

ನನ್ನ ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿದರೂ ಮತದಾರರು ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಾರು ಹೋಗಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಒಗ್ಗಟ್ಟಾಗಿ ಶ್ರಮಿಸಿ, ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನಿಸಬೇಕಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಲೂಟಿ ಆಗಿದೆ. ನಾಗೇಂದ್ರ ರಾಜೀನಾಮೆ ನೀಡಿದ್ದು, ಸರ್ಕಾರವೂ ಇದರಲ್ಲಿ ಭಾಗಿಯಾಗಿದೆ. ಸೂಕ್ತ ತನಿಖೆ ನಡೆದರೆ ಹಗರಣ ಹೊರ ಬರಲಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನಮಗೆ ಸೋಲಾಗಿರುವುದು ಬೇಸರ ತರಿಸಿದೆ. ಉತ್ತಮ ಅಭ್ಯರ್ಥಿ ಹಾಕಿದ್ದರೂ ಮತದಾರರು ಗ್ಯಾರಂಟಿ ಆಮಿಷಗಳಿಗೆ ಬಲಿಯಾಗಿದ್ದಾರೆ. ಸೋಲಿಗೆ ಅನೇಕ ಕಾರಣಗಳಿವೆ. ಅವೆಲ್ಲವನ್ನು ಬದಿಗಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಮುಂಬರುವ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಒಗ್ಗಟ್ಟಾಗಿ ಮಾಡಬೇಕಿದೆ ಎಂದರು.

ಎಂಎಲ್ಸಿ ಹೇಮಲತಾ ನಾಯಕ, ಬಿಜೆಪಿ ತಾಲೂಕು ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಬಸಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಅರವಿಂದಗೌಡ ಪಾಟೀಲ್, ಮಲ್ಲನಗೌಡ ಕೋನನಗೌಡ್ರ ಮಾತನಾಡಿದರು.

ಮುಖಂಡರಾದ ಶಿವಶಂಕರ ದೇಸಾಯಿ, ಶರಣಪ್ಪ ಈಳಿಗೇರ್, ಅಯ್ಯನಗೌಡ ಕೆಂಚಮ್ಮನವರ, ಶಕುಂತಲಾದೇವಿ ಮಾಲಿಪಾಟೀಲ್, ಸಿದ್ರಾಮೇಶ ಬೇಲೇರಿ, ಅಮರೇಶ ಹುಬ್ಬಳ್ಳಿ, ಪ್ರಕಾಶ ಬೇಲೇರಿ, ಶಿವಲೀಲಾ ದಳವಾಯಿ, ಸಂತೋಷಿಮಾ ಜೋಶಿ, ಎ.ಎಂ. ಶಂಕರಗೌಡ, ಎಸ್.ಎನ್. ಶ್ಯಾಗೋಟಿ, ರಾಚಪ್ಪ ಹುರಳಿ, ಫಕೀರಪ್ಪ ತಳವಾರ್, ಭೀಮಜ್ಜ ಮುರಡಿ, ಕಲ್ಲೇಶಪ್ಪ ಕರಮುಡಿ ಇತರರಿದ್ದರು.

ಪಕ್ಷ ಸಂಘಟನೆಗೆ ಒತ್ತು

ಕಾಂಗ್ರೆಸ್‌ನವರು ಬಿಜೆಪಿ ಮತ್ತು ನನ್ನ ವಿರುದ್ಧ ಸಲ್ಲದ ಅಪಪ್ರಚಾರ ನಡೆಸಿದ್ದರಿಂದ ಸೋಲಾಗಿದೆ. ಸುಳ್ಳು ಹೇಳುವ ಮೂಲಕ ಮತ ಗಿಟ್ಟಿಸಿಕೊಂಡಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಆರೋಪಿಸಿದರು. ಸೋಲನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೇವೆ. ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ಚಿರಋಣಿ. ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆಯಾಗಿದೆ. ದೇಶದ ಜನತೆಗೆ ಒಳ್ಳೆಯ ಆಡಳಿತ ನೀಡಲಿದ್ದಾರೆ ಎಂದರು.