ಶೃಂಗೇರಿ: ಸಹಕಾರ ಸಂಘದ ಬಗ್ಗೆ ಕನಿಷ್ಠ ಜ್ಞಾನವಿಲ್ಲದಂತೆ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿರುವುದು ಹಾಸ್ಯಸ್ಪದ ಎಂದು ಹಾಲಂದೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಾರನಕೊಡಿಗೆ ನಟರಾಜ್ ಹೇಳಿದರು.
ಪಟ್ಟಣದ ಶಾರದಾ ನಗರದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಲಯದ ಆದೇಶದಂತೆ ನ್ಯಾಯಾಲಯದಿಂದ ಹಕ್ಕು ಪಡೆದ ಮತ ಎಣಿಕೆ ಮಾಡಲು ಅವಕಾಶವಿರಲಿಲ್ಲ. ಈ ಬಗ್ಗೆ ಲಿಖಿತ ಆದೇಶವಿದ್ದರೂ ತಕರಾರು ತೆಗೆಯಲಾಗಿತ್ತು. ಮತದಾರರ ಪಟ್ಟಿ ಸಿದ್ದಪಡಿಸಿರುವುದು ಕಚೇರಿ ಸಿಬ್ಬಂದಿ ಹಾಗೂ ಸಹಕಾರ ಇಲಾಖೆ. ಮತದಾರರ ಪಟ್ಟಿಯನ್ನು ನಿಗದಿಯಾದಂತೆ 90ದಿನ ಮೊದಲೇ ಸೂಚನಾ ಲಕದಲ್ಲಿ ಪ್ರಕಟಿಸಲಾಗಿತ್ತು. ಮತದಾರರ ಚುನಾವಣೆಯಲ್ಲಿ ನಮ್ಮ ತಂಡ ಹೆಚ್ಚು ಮತಗಳಿಸಿದ್ದು, ಸೋಲುವ ಭೀತಿಯಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಎನ್.ಚಂದ್ರಶೇಖರ್ ಮಾತನಾಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರು ಸಾಲ ನೀಡಿಕೆಯಲ್ಲಿ ತಾರತಮ್ಯ ಎಸಗಿದ್ದು, ಕಾಂಗ್ರೆಸ್ ಬೆಂಬಲಿತ ಸಂಘವಾದ ನೆಮ್ಮಾರ್, ಹಾಲಂದೂರು ಮತ್ತು ಬೆಟ್ಟಗೆರೆ ಸಂಘಕ್ಕೆ ಕಡಿಮೆ ಸಾಲ ನೀಡಿದ್ದಾರೆ. ಸಂಘ ಈ ವರ್ಷ ಸೂಪರ್ ಮಾರ್ಕೆಟ್, ನೂತನ ಕಟ್ಟಡ ಸಹಿತ ವಿವಿಧ ಅಭಿವೃದ್ಧಿ ಕಾರ್ಯ ನಡೆಸಿದ್ದು, ಇದರಿಂದ ಲಾಭಾಂಶ ಕಡಿಮೆಯಾಗಿ ಬಿ ಗ್ರೇಡ್ ಪಡೆದಿದೆ. ಆಡಳಿತ ಮಂಡಳಿಯಿಂದ ಅವ್ಯವಹಾರ ನಡೆಸಿಲ್ಲ ಎಂದರು.
ನಿರ್ದೇಶಕರಾದ ರಾಜೇಶ್, ಅಶೋಕ್, ಸುಧಾಕರ, ಎಸ್.ತಿಮ್ಮಪ್ಪ ಮತ್ತಿತರರು ಇದ್ದರು.